ಪೊಲೀಸರ ಮೇಲೆ ಡ್ಯಾಗರ್ ನಿಂದ ಹಲ್ಲೆ; ಕೊಲೆ ಆರೋಪಿ ಮೇಲೆ ಬೇಲೂರು ಇನ್ಸ್ ಪೆಕ್ಟರ್ ವಿನಯ್ ಫೈರಿಂಗ್!

ಹಾಸನ: ಬಂಧಿಸಲು ಹೋದ ಪೊಲೀಸರ ಮೇಲೆ ಡ್ಯಾಗರ್ ನಿಂದ ಮೇಲೆ ಹಲ್ಲೆ ಮಾಡಿ ಪರಾರಿಯಾಗಲೆತ್ನಿಸಿದ ಕೊಲೆ ಪ್ರಕರಣದ ಆರೋಪಿ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಇಂದು ಮುಂಜಾನೆ ಬೇಲೂರು ತಾಲ್ಲೂಕಿನ, ಬಿಕ್ಕೋಡು ಗ್ರಾಮದಲ್ಲಿ ನಡೆದಿದೆ.

ಸೆ.14 ರಂದು ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ವಾಟರ್‌ಮ್ಯಾನ್ ಗಣೇಶ್‌ನನ್ನು ಕೊಲೆ ಮಾಡಿದ್ದ ರೌಡಿಶೀಟರ್ ಮಧು ಕಾಲಿಗೆ ಬೇಲೂರು ಇನ್ಸ್ ಪೆಕ್ಟರ್ ವಿನಯ್ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಆರೋಪಿಯನ್ನು ಬಂಧಿಸಿ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ನಂತರ ತಲೆ ಮರೆಸಿಕೊಂಡಿದ್ದ ಮಧು ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಬರುವ ಮಾಹಿತಿ ಆಧರಿಸಿ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ ಆತನನ್ನು ಸುತ್ತುವರಿದ ಪೊಲೀಸರ ಮೇಲೆ ಡ್ಯಾಗರ್ ನಿಂದ ದಾಳಿ ನಡೆಸಿದ.

ಈ ವೇಳೆ ಅರೇಹಳ್ಳಿ ಕಾನ್ಸ್ ಸ್ಟೇಬಲ್ ಗಳಾದ ಶಶಿ ಹಾಗೂ ಅಶೋಕ ಗಾಯಗೊಂಡರು. ತಕ್ಷಣ ಪಿಸ್ತೂಲು ಹೊರ ತೆಗೆದ ಇನ್ಸ್ ಪೆಕ್ಟರ್ ವಿನಯ್, ಶರಣಾಗುವಂತೆ ಮಧುಗೆ ತಾಕೀತು ಮಾಡಿದರು. ಆದರೆ ಆತ ಮತ್ತೆ ಕಲ್ಲಿನಿಂದ ದಾಳಿ ಮಾಡಿದ್ದರಿಂದ ಕಾಲಿಗೆ ಗುಂಡು ಹಾರಿಸಿದರು.