ಕೆ.ಎಸ್.ಆರ್.ಟಿ.ಸಿ. ಬಸ್ ಆಕ್ಸಲ್ ತುಂಡಾಗಿ ಭೀಕರ ಅಪಘಾತ; ಓರ್ವ ಸ್ಥಳದಲ್ಲೇ ಸಾವು, 10 ಪ್ರಯಾಣಿಕರಿಗೆ ಗಾಯ

ನಿಯಂತ್ರಣ ತಪ್ಪಿ ಕೃಷಿ ಭೂಮಿಯಲ್ಲಿದ್ದ ಮನೆಗೆ ಡಿಕ್ಕಿ ಹೊಡೆದ ಬಸ್

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಶಾಲೆಯ ಕಾಂಪೌಂಡ್‌ ಹಾಗೂ ಮನೆಗೆ ಸಾರಿಗೆ ಬಸ್ ಡಿಕ್ಕಿ ಹೊಡೆದು ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದು ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ನಡೆದಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ, ಉದಯಪುರ ಗ್ರಾಮದ ಅಮೃತ್‌ರಾಜ್ (34) ಮೃತ ವ್ಯಕ್ತಿ, ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್‌ನ ಆಕ್ಸಲ್ ತುಂಡಾಗಿ ರಸ್ತೆ ಪಕ್ಕದ ಕೃಷಿ ಜಮೀನಿಗೆ ನುಗ್ಗಿದೆ. ಹೊಲದಲ್ಲಿದ್ದ ಮನೆಗೆ ಡಿಕ್ಕೆ ಹೊಡೆಯಿತು. ಅಷ್ಟಕ್ಕೂ ನಿಲ್ಲದ ಬಸ್ ಮುಂದುವರಿದು ಪಕ್ಕದಲ್ಲಿದ್ದ ಜೆಎಸ್ಎಸ್ ವಸತಿ ಶಾಲೆಯ ಕಾಂಪೌಂಡ್ ಡಿಕ್ಕಿ ಹೊಡೆದ ನಂತರ ನಿಂತಿದೆ.

ಬಸ್ ಡಿಕ್ಕಿಯಾಗಿ ಜಖಂಗೊಂಡಿರುವ ಮನೆ

ಮನೆಯ ಅಡುಗೆ ಮನೆ ಭಾಗಕ್ಕೆ ಡಿಕ್ಕಿಯಾದ್ದರಿಂದ ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಅಡುಗೆ ಕೋಣೆಯ ಗೋಡೆ ಕುಸಿದುಬಿದ್ದಿದೆ.