ನವಜಾತ ಗಂಡು ಮಗು ಮಾರಾಟ ಆರೋಪ. ತಾಯಿ, ಆಶಾ ಕಾರ್ಯಕರ್ತೆ ಸೇರಿ ಐವರ ಬಂಧನ.

ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗುವನ್ನು ಕೊಂಡ ಮಹಿಳೆ ಉಷಾ ಹಾಗೂ ಮಗು ಕೊಡಲು ಪ್ರೇರಣೆ ನೀಡಿದ ಆರೋಪದಲ್ಲಿ ಶ್ರೀಕಾಂತ್ ಹಾಗೂ ಸುಬ್ರಹ್ಮಣ್ಯ ಎಂಬುವವರ ಬಂಧಿಸಲಾಗಿದೆ.

ಹಾಸನ: ಮಗು ಜನಿಸಿದ ಒಂದೇ ದಿನಕ್ಕೆ ಗಂಡು ಮಗುವನ್ನು ಮಾರಾಟ ಮಾಡಿರುವ ದೂರು ಬಂದ ಹಿನ್ನೆಲೆಯಲ್ಲಿ ತಾಯಿ ಹಾಗೂ ಆಶಾ ಕಾರ್ಯಕರ್ತೆ ಸೇರಿ ಐವರನ್ನು ಬಂಧಿಸಿರುವ ಘಟನೆ  ಸಕಲೇಶಪುರ ತಾಲ್ಲೂಕಿನ, ಬ್ಯಾಕರವಳ್ಳಿ ಗ್ರಾಮದಲ್ಲಿ ನಡೆದಿದೆ.

2023 ರ ನವೆಂಬರ್ 15 ರಂದು ಸಕಲೇಶಪುರ ತಾಲ್ಲೂಕಿನ, ಹೆತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಗಿರಿಜಾ ಮಗುವಿಗೆ ಜನ್ಮ ನೀಡಿದ್ದರು.‌ ತನಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಎಂದು ಮಗು ಹುಟ್ಟಿದ ಮಾರನೇ ದಿನ ನವೆಂಬರ್ 16 ರಂದು ಚಿಕ್ಕಮಗಳೂರು ಮೂಲದ ಉಷಾ ಎಂಬ ಮಹಿಳೆಗೆ ಮಗು ಹಸ್ತಾಂತರ ಮಾಡಿದ್ದರು. ಮಗು ಅನಧಿಕೃತವಾಗಿ ಹಸ್ತಾಂತರ ಆಗಿರುವ ಬಗ್ಗೆ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಬಂದಿದ್ದು, ಇದನ್ನು ಆಧರಿಸಿ ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್ ನೇತೃತ್ವದ ತಂಡ ಪ್ರಕರಣವನ್ನು ಬಯಲಿಗೆಳೆದಿದೆ.

ಘಟನೆ ಸಂಬಂಧ ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗುವನ್ನು ಕೊಂಡ ಮಹಿಳೆ ಉಷಾ ಹಾಗೂ ಮಗು ಕೊಡಲು ಪ್ರೇರಣೆ ನೀಡಿದ ಆರೋಪದಲ್ಲಿ ಶ್ರೀಕಾಂತ್ ಹಾಗೂ ಸುಬ್ರಹ್ಮಣ್ಯ ಎಂಬುವವರ ಬಂಧಿಸಲಾಗಿದೆ. ತಮಗೆ ಈಗಾಗಲೇ ಇಬ್ಬರು ಮಕ್ಕಳಿದ್ದ ಕಾರಣ ಮಗುವನ್ನು ಬೇರೆಯವರಿಗೆ ನೀಡಿದ್ದಾಗಿ ತನಿಖೆ ವೇಳೆ ಬಗ್ಗೆ ತಾಯಿ ಗಿರಿಜಾ ಮಾಹಿತಿ ನೀಡಿದ್ದಾರೆ.

ಆದರೆ ಕೆಲವರ ಮಧ್ಯಪ್ರವೇಶದಿಂದ ಮಗುವನ್ನು ಮಾರಾಟ ಮಾಡಿದ ಬಗ್ಗೆ ಗಂಭೀರ ಆರೋಪವಿದ್ದು, ತಾಯಿ ಮಗುವಿನ ರಕ್ಷಣೆ ಬಗ್ಗೆ ಗಮನಹರಿಸಬೇಕಿದ್ದ ಆಶಾ ಕಾರ್ಯಕರ್ತೆಯಿಂದಲೇ ಕಾನೂನು ಉಲ್ಲಂಘನೆಗೆ ಬೆಂಬಲ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಜನವರಿ 2 ರಂದು ಬಂಧ ಅಧಿಕೃತ ಮಾಹಿತಿ ಆಧರಿಸಿ ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್‌ ಪೊಲೀಸರಿಗೆ ದೂರು ನೀಡಿದ್ದು, ಕೇಸ್ ದಾಖಲಿಸಿಕೊಂಡು ಪೊಲೀಸರು ತಾಯಿ ಸೇರಿ ಐವರನ್ನು ಬಂಧಿಸಿದ್ದು, ಮಗುವಿಗೆ ಹಾಸನ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಿಲಾಗಿದೆ.‌ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.