ರೆಸಾರ್ಟ್ ಗಲಾಟೆ: ಮಂಗಳೂರಿನ ಅತಿಥಿಗಳಿಂದಲೇ ಹಲ್ಲೆ, ಗೂಂಡಾಗಿರಿ, ದಾಂಧಲೆ- ಸಿಸಿಟಿವಿ ದೃಶ್ಯ ರಿಲೀಜ್ ಮಾಡಿದ ಮಾಲೀಕ

ಹಾಸನ: ಸಕಲೇಶಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ರೆಸಾರ್ಟ್‌ವೊಂದರಲ್ಲಿ ನಿನ್ನೆ ರಾತ್ರಿ ನಡೆದ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅತಿಥಿಗಳೇ ರೆಸಾರ್ಟ್ ಸಿಬ್ಬಂದಿ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ಮಾಲೀಕ ಆರೋಪಿಸಿದ್ದು, ಇದಕ್ಕೆ‌ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡಿದ್ದಾರೆ.

 

ಬಲವಂತದ ಚೆಕ್ ಔಟ್ ಗೆ ಒಪ್ಪದ ಅತಿಥಿಗಳ ಮೇಲೆ ಸ್ಟಂಪ್, ಬ್ಯಾಟ್ ಗಳಿಂದ ಹಲ್ಲೆ ನಡೆಸಿದ ರೆಸಾರ್ಟ್ ಸಿಬ್ಬಂದಿ!

ಮಂಗಳೂರಿನಿಂದ ಬಂದಿದ್ದ ಮೂರು ಕುಟುಂಬಗಳ 20ಕ್ಕೂ ಹೆಚ್ಚು ಜನರು ರೆಸಾರ್ಟ್‌ನಲ್ಲಿ ದಾಂಧಲೆ ನಡೆಸಿ, ಮತ್ತೊಂದು ಕುಟುಂಬದ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ರೆಸಾರ್ಟ್ ಮಾಲೀಕರು ಸಂಪೂರ್ಣ ಘಟನೆಯ ಸಿಸಿಟಿವಿ ದೃಶ್ಯಾವಳಿಯೊಂದಿಗೆ ಆರೋಪಿಗಳ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

ರಾತ್ರಿ 7 ಗಂಟೆಯ ನಂತರ ಈಜುಕೊಳ ಬಳಕೆಗೆ ನಿರ್ಬಂಧವಿತ್ತೆಂಬ ಕಾರಣಕ್ಕೆ ಗಲಾಟೆ ಆರಂಭವಾಗಿದ್ದು, ಈ ವೇಳೆ ಮಂಗಳೂರಿನ ಗುಂಪು ದೊಣ್ಣೆ ಬಡಿಗೆ ಹಿಡಿದು ರೆಸಾರ್ಟ್‌ನಲ್ಲಿ ಓಡಾಡುತ್ತಾ, ಕಲ್ಲು ತೂರಾಟ ನಡೆಸಿ, ಮತ್ತೊಂದು ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿದೆ ಎಂದು ಆರೋಪಿಸಲಾಗಿದೆ.

ಈ ಗಲಾಟೆಯಲ್ಲಿ ರೆಸಾರ್ಟ್ ಸಿಬ್ಬಂದಿಯನ್ನೂ ಗುರಿಯಾಗಿಸಲಾಗಿದ್ದು, ತಮ್ಮ ವಿರುದ್ಧ ವಿನಾಕಾರಣ ಆರೋಪಗಳನ್ನು ಮಾಡಲಾಗಿದೆ ಎಂದು ರೆಸಾರ್ಟ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಕೆಲ ಕಿಡಿಗೇಡಿಗಳು ರೌಡಿಗಳಂತೆ ರೆಸಾರ್ಟ್‌ನಲ್ಲಿ ಗಲಾಟೆ ನಡೆಸುವುದು ಸೆರೆಯಾಗಿದೆ. ಘಟನೆಯ ನಂತರ ಆರೋಪಿಗಳು ರೆಸಾರ್ಟ್ ಖಾಲಿ ಮಾಡಿಕೊಂಡು ಹೋಗಿದ್ದು, ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗಿದೆ ಎಂದು ಮಾಲೀಕರು ಆರೋಪಿಸಿದ್ದಾರೆ.