ದ್ವೀಪರಾಷ್ಟ್ರದ ಅಧ್ಯಕ್ಷಗಾದಿ ಯಾರಿಗೆ? ಶ್ರೀಲಂಕಾದಿಂದ ಎಚ್.ಬಿ.ಮದನಗೌಡ ಪ್ರತ್ಯಕ್ಷ ಸಮೀಕ್ಷೆ

ಸೆ.21 ರಂದು ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ| ಪುಟ್ಟ ದೇಶದ ತುಂಬೆಲ್ಲಾ ಅನುರಣಿಸುತ್ತಿದೆ ಅರುನ ಕುಮಾರ ದಿಶಾನಾಯಕ ಹೆಸರು

ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ರಾಷ್ಟ್ರಪತಿ/ ಅಧ್ಯಕ್ಷರನ್ನು ಆಯ್ಕೆ ಮಾಡುವ ಮಹತ್ವದ ಚುನಾವಣೆ ಇದೇ ತಿಂಗಳ 21 ರಂದು ನಡೆಯಲಿದೆ. ಒಂದೇ ದಿನದಲ್ಲಿ ಮತ ಎಣಿಕೆ ನಡೆದು, ಹೊಸ ಸರ್ಕಾರ, ಹೊಸ ಅಧ್ಯಕ್ಷರ ಜೊತೆಗೆ ಹೊಸತನವನ್ನೂ ಎದುರುಗೊಳ್ಳುವ, ಸ್ವಾದಿಸುವ ಕಾತರದಲ್ಲಿ ಲಂಕಾಜನ ಕಾಯುತ್ತಿದ್ದಾರೆ.

ಅಚ್ಚರಿ ಎಂದರೆ ಅಧ್ಯಕ್ಷರಾಗಲು ಒಟ್ಟು 39 ಮಂದಿ ಕಣದಲ್ಲಿದ್ದಾರೆ ಇವರಲ್ಲಿ ನಾಲ್ಕು ಮಂದಿಯ ಹೆಸರು ಮುಂಚೂಣಿಯಲ್ಲಿದ್ದರೂ, ನೇರಾನೇರ ಹಣಾಹಣಿ ಏರ್ಪಟ್ಟಿರುವುದು ಸಜಿತ ಪ್ರೇಮದಾಸ ಮತ್ತು ಅರುನ ಕುಮಾರ ದಿಶಾನಾಯಕ ಇಬ್ಬರ ನಡುವೆ ಮಾತ್ರ.
ಈ ಚುನಾವಣೆಯಲ್ಲಿ ದೇಶದಲ್ಲಿರುವ ಒಟ್ಟು 2 ಕೋಟಿ 2 lಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಲ್ಲಿ ಒಂದೂವರೆ ಕೋಟಿಗೂ ಅಧಿಕ ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಮನವರಿಕೆಯಾಗಿರುವ ನಾಡಿಮಿಡಿತ.

ಒಂದು ಕುಟುಂಬದ ಕೈಯಲ್ಲಿ ದೇಶ ನಲುಗಿ ಹೋಗಿದೆ, ಹಾಲಿ ಆಕಸ್ಮಿಕವಾಗಿ ಅಧಿಕಾರದಲ್ಲಿರುವ ರನಿಲ್ ವಿಕ್ರಮಸಿಂಘೆ ಸೇರಿದಂತೆ ರಾಜಪಕ್ಷ ಕುಟುಂಬವನ್ನು ದೂರ ಇಡಬೇಕೆನ್ನುವ ತೀರ್ಮಾನವನ್ನು ಜನ ಮಾಡಿದ್ದಾರೆ ಅನ್ನೋದು ಸ್ಪಷ್ಟ.
ರಾಜಕೀಯ ಅಸ್ಥಿರತೆ ನಡುವೆ ಅಧ್ಯಕ್ಷರ ಹುದ್ದೆ ಅಲಂಕರಿಸಿರುವ ರನಿಲ್ ವಿಕ್ರಮಸಿಂಘೆ (75) ಅವರೂ ಚುನಾವಣಾ ಕಣದಲ್ಲಿದ್ದಾರೆ.

ಇವರ ಅದೃಷ್ಟ ಎಂದರೆ ಇಲ್ಲಿಯವರೆಗೆ ಒಂದೇ ಒಂದು ಚುನಾವಣೆ ಗೆಲ್ಲದ ರನಿಲ್, ಶ್ರೀಲಂಕಾ ಸರ್ಕಾರದಲ್ಲಿ ಪ್ರಮುಖ ಖಾತೆಗಳಾದ ರಕ್ಷಣಾ, ಹಣಕಾಸು ಹಾಗೂ ಇತರೆ ಹುದ್ದೆಗಳನ್ನು ಅನುಭವಿಸಿದ್ದಾರೆ. ಪ್ರಸ್ತುತ ಹೊಸ ಹೊಸ ಭರವಸೆಗಳೊಂದಿಗೆ ಪಕ್ಷೇತರ ( Independent ) ಅಭ್ಯರ್ಥಿಯಾಗಿ ರನಿಲ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಮತದಾರರ ಮನ ಗೆಲ್ಲುವಲ್ಲಿ ವಿಫಲರಾಗಿದ್ದಾರೆ ಅನ್ನಿಸುತ್ತಿದೆ.

ಮತ್ತೊರ್ವ ಅಭ್ಯರ್ಥಿ ಕೊಲಂಬೊ ಗ್ರಾಮೀಣ ಕ್ಷೇತ್ರದಿಂದ ಆಯ್ಕೆಯಾಗಿರುವ ಹಾಲಿ ಪ್ರತಿಪಕ್ಷ ನಾಯಕನಾಗಿರುವ ಮಾಜಿ ರಾಷ್ಟ್ರಧ್ಯಕ್ಷ ಪ್ರೇಮದಾಸ ಅವರ ಪುತ್ರ ಸಜಿತ್ ಪ್ರೇಮದಾಸ (57) ಅಧ್ಯಕ್ಷರಾಗುವ ಆಸೆಯಿಂದ ತಮ್ಮದೇ ಪಕ್ಷವಾದ ಸಮಾಗಿ ಜನ ಬಲವೆಗಯ (SAMAGI JANA BALAWEGAYA) ಅಭ್ಯರ್ಥಿ ಯಾಗಿ ಕಣದಲ್ಲಿದ್ದಾರೆ.

ಇವರಿಗೆ ತಂದೆ ಪ್ರೇಮದಾಸ ಹೆಸರೇ ಟ್ರಾಂಪ್ ಕಾರ್ಡ್. ಗ್ರಾಮೀಣ ಭಾಗದಲ್ಲಿ ತಮಿಳು ಭಾಷಿಗರ ಒಲವು ಸಜಿತ್ ಪರವಾಗಿದ್ದರೂ ಅದೇ ಗೆಲುವು ತಂದು ಕೊಡಲಿದೆ ಎಂದು ಹೇಳಲಾಗದು ಎಂದು ಅವರದೇ ಪಕ್ಷದ ಮುಖಂಡರ ಮಾತಾಗಿದೆ. ಇವರೊಂದಿಗೆ ಮಾಜಿ ರಾಷ್ಟ್ರಧ್ಯಕ್ಷ ಮಹಿಂದ್ರಾ ರಾಜಪಕ್ಷೆ ಪುತ್ರ ಲಕ್ಷ್ಮನ್ ನಮಲ್ ರಾಜಪಕ್ಷ (38) ತಮ್ಮ ಪಕ್ಷವಾದ ಶ್ರೀಲಂಕಾ ಪೊದುಜನ ಪೆರಮುನ (SRI LANKA PODUJANA PERAMUNA) ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಯಲ್ಲಿದ್ದಾರೆ.

ಇವರು ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದು. ತಂದೆಯ ಸರ್ಕಾರದಲ್ಲಿ ಯುವಜನ ಮತ್ತು ಕ್ರೀಡಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಶ್ರೀಲಂಕಾ ಜನರು ರಾಜಪಕ್ಷ ಬಗ್ಗೆ ಇವತ್ತಿಗೂ ಒಲವು ಹೊಂದಿದ್ದಾರೆ, ಎಲ್.ಟಿ. ಟಿ.ಯಿಂದ ದೇಶ ರಕ್ಷಿಸಿದ್ದಕ್ಕಾಗಿ ಅವರ ಬಗ್ಗೆ ಗೌರವ ಇದೆ. ಅದಕ್ಕಾಗಿ ಶ್ರೀಲಂಕಾ ಜನರು ಅಷ್ಟು ಗೌರವದಿಂದ 10 ವರ್ಷ ಅಧಿಕಾರ ನೀಡಿದರು. ಆದರೆ ರಾಜಪಕ್ಷ, ಜನರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಎಡವಿದರು ಎಂಬ ಆರೋಪ ಇದೆ.

ರಾಜಪಕ್ಷ ತನ್ನ ಕುಟುಂಬದ ನಾಲ್ವರು ಸಹೋದರರು, ಪುತ್ರ, ಭಾವ ಹೀಗೆ ತಮ್ಮದೇ ಕುಟುಂಬದ ಕ್ಯಾಬಿನೆಟ್ ಮಾಡಿಕೊಂಡು ಸರ್ಕಾರ ನಡೆಸಿದರು. ಜೊತೆಗೆ ತಿಂದು ತೆಗುವ ಗೆಳೆಯರ ಬಳಗ ಸೇರಿ ಕೊಂಡಿತು. 10 ವರ್ಷ ಆಡಳಿತ ನಡೆಸಿದರೂ ಪುಟ್ಟ ದೇಶವನ್ನು ಹಸನು ಮಾಡಲಿಲ್ಲ, ಹೊಸತನದ ಮಾತು ಹುಸಿಯಾಯಿತು ಎನ್ನುವ ಕಡು ಕೋಪ ದೇಶದ ಪ್ರತಿಯೊಬ್ಬರಲ್ಲೂ ಮನೆ ಮಾಡಿದೆ. ಹಾಗಾಗಿ ನಮಲ್ ಸ್ಪರ್ಧೆ ಈ ಚುನಾವಣೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಇವರೆಲ್ಲರ ನಡುವೆ ನಕ್ಷತ್ರದಂತೆ ಲಂಕಾ ತುಂಬೆಲ್ಲ ಬೆಳಗುತ್ತಿರುವ ಹೆಸರು ಅರುನ ಕುಮಾರ ದಿಶಾನಾಯಕೆ(56). ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಂತೆಯೇ ದೂರ ದೃಷ್ಟಿ ಇರುವ ವ್ಯಕ್ತಿ ದೇಶಕ್ಕೆ ಬೇಕು ಎನ್ನುವ ಇಚ್ಛೆಯನ್ನು ಹೊಂದಿರುವ ಲಂಕನ್ನರು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಯೂ ಅರುನ ಕುಮಾರ ದಿಶಾನಾಯಕೆ. ಇವರು ತಮ್ಮದೇ ಪಕ್ಷವಾದ ಜನತಾ ವಿಮುಕ್ತಿ ಪೆರಮುನ (JANATHA VIMUKTHI PERAMUNA ) ಅಭ್ಯರ್ಥಿಯಾಗಿದ್ದಾರೆ.

ಕೊಲಂಬೊ ನಗರದಿಂದ ಸಂಸತ್ ಸದಸ್ಯರಾಗಿ ಆಯ್ಕೆಗೊಂಡ ದಿಶಾನಾಯಕೆ ಚಂದ್ರಿಕಾ ಕುಮಾರ ತುಂಗ ಅವರ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ರಾಜಕೀಯದ ಜೊತೆಗೆ ಸದಾ ಜನಪರವಾಗಿದ್ದ ದಿಶಾನಾಯಕೆ 2019 ರ ಅಧ್ಯಕ್ಷಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.ಆದರೆ ದಿಶಾನಾಯಕೆ ಪರ ಅಂದು ಮತದಾರರು ನಿಲ್ಲಲಿಲ್ಲ.
ಅವರು ಚುನಾವಣೆಯಲ್ಲಿ ಪಡೆದ ಮತಗಳು 418,533. ಒಟ್ಟು ಮತದಾನದಲ್ಲಿ ಕೇವಲ ಮೂರು ಪರ್ಸೆಂಟ್ ಮಾತ್ರ.ಆದರೆ ಈ ಬಾರಿ ಚುನಾವಣೆ ಚಿತ್ರಣವೇ ಬದಲಾಗಿ ಹೋಗಿದೆ.ಭಾರತದಲ್ಲಿ ಮೋದಿ….ಮೋದಿ…. ಎನ್ನುವ ಹಾಗೆ ಶ್ರೀಲಂಕಾ ದೇಶದ ತುಂಬಾ ಅರುನ .. ಅರುನ ಎನ್ನುವ ಕೂಗೆದ್ದಿದೆ. ಶ್ರೀಲಂಕಾವನ್ನು ಬ್ರಿಟಿಷರು, ಚೀನಾದವರು, ಭಾರತದವರು ಲೂಟಿ ಹೊಡೆಯಲಿಲ್ಲ, ನಮ್ಮನ್ನು ಕಷ್ಟಕ್ಕೆ ದೂಡಲಿಲ್ಲ, ತಿನ್ನುವ ಅನ್ನ ಕಿತ್ತುಕೊಂಡು, ಸಾಮಾನ್ಯ ಜನರ ಜೀವನವನ್ನೇ ಸರ್ವನಾಶ ಮಾಡಲು ಕಾರಣರಾದ ನಮ್ಮವರನ್ನೇ ನಾವೀಗ ದೂರ ಇಡಬೇಕಾಗಿದೆ. ಅದಕ್ಕಾಗಿ ಭ್ರಷ್ಟ ಮುಕ್ತ ದೇಶದ ಬದಲಾವಣೆ ಅಗತ್ಯವಾಗಿದೆ ಅವರೆಲ್ಲರೂ ಒಂದೇ ತಟ್ಟೆಯಲ್ಲಿ ಉಂಡು ನಮ್ಮನ್ನು ಬೀದಿಗೆ ಬಿಟ್ಟರು. ಅಂಥವರಿಂದ ದೇಶ ಉಳಿಯಬೇಕಾದರೆ ಬದಲಾವಣೆ ಅಗತ್ಯವಿದೆ ಎನ್ನುವ ಕೂಗು ಎಬ್ಬಿಸಿರುವವರು, ಶಿಕ್ಷಕರು, ವಕೀಲರು, ಸಾಮಾಜಿಕ ಚಿಂತಕರು, ಸಿನಿಮಾ ರಂಗದವರು, ಚಾಲಕರು, ಕೂಲಿ ಕಾರ್ಮಿಕರು. ಹಾಗಾಗಿ 75 ವರ್ಷಗಳಿಂದ ದೇಶ ಲೂಟಿ ಹೊಡೆದವರನ್ನು ದೂರವಿಟ್ಟು Mr.Clean Arunakumar Dissanayake ಎಂದೇ ಪ್ರಖ್ಯಾತಿ ಪಡೆದಿರುವ ಅರುನ ಅವರನ್ನು ಆಯ್ಕೆ ಮಾಡಬೇಕೆನ್ನುವ ಹಕ್ಕೊತ್ತಾಯವನ್ನು ಸಾಮಾನ್ಯರಿಂದ ಅಸಾಮಾನ್ಯರವರೆಗೂ ಸ್ವಯಂ ಪ್ರೇರಿತರಾಗಿ ಜನ ಅರುನ ಪರ ಕೂಗು ಎಬ್ಬಿಸಿದ್ದಾರೆ.

ಚುನಾವಣೆ ಶುರುವಾದಾಗ ಅರುನ ಅವರ ಹೆಸರು ಎಲ್ಲಿಯೂ ಕೇಳಿ ಬರಲಿಲ್ಲ. ಆದರೆ ಪ್ರಸ್ತುತ ನೋಡಿದ್ರೆ ದೇಶದ ರಕ್ಷಣೆ ಭ್ರಷ್ಟರಲ್ಲದ ಅರುನ ಕುಮಾರ ದಿಶಾನಾಯಕೆ ಅವರಿಂದ ಮಾತ್ರ ಸಾಧ್ಯ ಎನ್ನುವ ನಿರ್ಧಾರಕ್ಕೆ ಮತದಾರರು ಬಂದಿದ್ದಾರೆ.
ಹಾಗಾಗಿ ಅರುನ ಎನ್ನುವ ಹೆಸರು ದೇಶದ ತುಂಬೆಲ್ಲ ಪ್ರತಿದ್ವನಿಸುತ್ತಿದೆ. ಕಣದಲ್ಲಿ 39 ಮಂದಿ ಇದ್ದರೂ ಅಂತಿಮವಾಗಿ ಸ್ಪರ್ಧೆ ನಡೆಯುತ್ತಿರುವುದು ಸಜಿತ ಪ್ರೇಮದಾಸ ಮತ್ತು ಅರುನ ಕುಮಾರ ದಿಶಾನಾಯಕ ನಡುವೆ ಮಾತ್ರ.

ಗೆಲುವಿನ ನಗೆಯನ್ನು ಅರುನ ಬೀರಲಿದ್ದಾರೆ ಎಂಬ ಮಾತು ಜೋರಾಗಿ ಮರ್ಮರಿಸಲಾರಂಭಿಸಿದೆ. ಒಟ್ಟಿನಲ್ಲಿ ಭಯೋತ್ಪಾದನಾ ಚಟುವಟಿಕೆ, ಸುನಾಮಿ ಹಾಗೂ ಕೋವಿಡ್ ಗಿಂತ ಮುಖ್ಯವಾಗಿ ಕೆಟ್ಟ ರಾಜಕೀಯ ಕಾರಣಕ್ಕಾಗಿ ರಾಜಕೀಯ ದಳ್ಳುರಿಯಿಂದ ದಿವಾಳಿ ಆತಂಕದ ಸುಳಿಗೂ ಸಿಲುಕಿದ್ದ ದೇಶವಾಸಿಗಳು ಹೊಸ ಆಶಾಭಾವದ ನಿರೀಕ್ಷೆಯಲ್ಲಿದ್ದಾರೆ.