ಏಳು ಮಕ್ಕಳ ಪಾಲಕರಿಂದಲೇ ಮಗನಿಗೆ ಸರಪಳಿ‌ ಬಂಧನ!; ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಪೊಲೀಸರು

ಡೌನ್ ಸಿಂಡ್ರೋಮ್ ನಿಂದ ಬಳಲುತ್ರಿರುವ ಬಾಲಕ

ಹಾಸನ: ಸಕಲೇಶಪುರ ತಾಲೂಕು ಕ್ಯಾನಳ್ಳಿಯಲ್ಲಿ ಬುಧವಾರ ಕಬ್ಬಿಣದ ಸರಪಳಿಯಿಂದ‌ ಬಂಧಿತನಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕನ ಗುರುತು ಹಾಗೂ ಆತನ ಸಂಕಷ್ಟ ಸ್ಥಿತಿಗೆ ಕಾರಣ ಪತ್ತೆಯಾಗಿದೆ.

ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿರುವ ಅಸ್ಸಾಂ ಮೂಲದ ಕಾರ್ಮಿಕ ದಂಪತಿ, 11 ವರ್ಷದ ಮಗನನ್ನು ಸರಪಳಿಯಿಂದ ಕಟ್ಟಿ ಮನೆಯೊಳಗೆ ಕೂಡಿ ಹಾಕುತ್ತಿದ್ದರು. ಆತ ತಪ್ಪಿಸಿಕೊಂಡು ಮನೆಯಿಂದ ಹೊರ ಬಂದಿದ್ದ ಎಂಬ ಅಂಶ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಗ್ರಾಮದ ಮಲ್ಲೇಶ್ ಎಂಬವರ ಕಾಫಿ ತೋಟದಲ್ಲಿ ಕಾಫಿ ಹಣ್ಣು ಕೊಯ್ಲಿಗಾಗಿ ಬಂದಿದ್ದ ಅಮೀರ್ ಹುಸೇನ್- ಹಸೀನಾಬಾನು ದಂಪತಿ, ತಮ್ಮ ಪುತ್ರನನ್ನು ಕೂಡಿ ಹಾಕಿದ್ದರು. ದಂಪತಿಗೆ 7 ಮಕ್ಕಳಿದ್ದು, ಈ ಬಾಲಕ ಡೌನ್ ಸಿಂಡ್ರೋಮ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ.

ಗ್ರಾಮಾಂತರ ಠಾಣೆ ಪಿಎಸ್‌ಐ ಖತೀಜಾ ಹಾಗೂ ಸಿಬ್ಬಂದಿ ತೋಟಕ್ಕೆ ತೆರಳಿ ಬಾಲಕನನ್ನು ಪಟ್ಟಣದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ನಂತರ ಬಾಲಕನನ್ನು ಸರಪಳಿಯಿಂದ‌ ಬಂಧಿಸದಂತೆ ಪಾಲಕರಿಗೆ ಎಚ್ಚರಿಕೆ‌ ನೀಡಿದರು.

‘ನಾವು ಕೆಲಸಕ್ಕೆ ಹೋದ ಬಳಿಕ ಮಗ ಮನೆಯಲ್ಲಿರದೇ ಓಡಿಹೋಗುತ್ತಿದ್ದ. ದಿನವೂ ಹುಡುಕಾಡಬೇಕಿತ್ತು. ಅವನಿಗೆ ಏನೂ ತಿಳಿಯುವುದಿಲ್ಲ. ಆತನನ್ನು ಆಸ್ಪತ್ರೆಗೆ ದಾಖಲಿಸಲು ಹಣವಿಲ್ಲ. ನಮ್ಮಿಂದ ದೂರವಾಗುತ್ತಾನೆಂಬ ಭಯದಿಂದ ಕಟ್ಟಿ ಹಾಕಿದ್ದೆವು, ಆದರೆ ಹಿಂಸಿಸಿಲ್ಲ. ತೋಟದ ಮಾಲೀಕರೂ ನಮಗೆ ಎಚ್ಚರಿಕೆ ನೀಡಿದ್ದರು’ ಎಂದು ಬಾಲಕನ ತಂದೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

‘ದಂಪತಿ 5 ತಿಂಗಳಿಂದ ತೋಟದ ಲೈನ್ ಮನೆಯಲ್ಲಿ ವಾಸವಿದ್ದಾರೆ. ಪ್ರಕರಣದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಮನಕ್ಕೆ ತರಲಾಗಿದ್ದು, ಇಲಾಖೆಯ ವಿಚಾರಣೆ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿವೈಎಸ್ಪಿ ಪ್ರಮೋದ್‌ಕುಮಾ‌ರ್ ತಿಳಿಸಿದ್ದಾರೆ.