ಹೆಣ್ಣು ಮಕ್ಕಳಿಗೆ ಆಸ್ತಿ ಕೇಳಿದ ಮೊದಲ ಪತ್ನಿಯನ್ನು‌‌ ಕೊಚ್ಚಿ ಕೊಂದವನಿಗೆ ಜೀವಾವಧಿ ಶಿಕ್ಷೆ

ಹಾಸನ: ಹೆಣ್ಣು ಮಕ್ಕಳಿಗೆ ಆಸ್ತಿ ನೀಡಬೇಕು ಎನ್ನುವ ಕಾರಣಕ್ಕೆ ಜಗಳ ತೆಗೆದು ಮೊದಲ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಪತಿಗೆ ಆಜೀವ ಕಾರಾಗೃಹ ವಾಸ ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಿ ಹಾಸನದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಹಾಸನ ತಾಲೂಕು ಹಲಗೇನಹಳ್ಳಿಯ ಲಕ್ಷ್ಮಣ ತನ್ನ ಪತ್ನಿ ವಿನೋದಮ್ಮ ಅವರನ್ನು ಕೊಂದ ಅಪರಾಧಕ್ಕೆ ಶಿಕ್ಷೆಗೆ ಗುರಿಯಾದ ಅಪರಾಧಿ.

ಲಕ್ಷ್ಮಣ ಅವರನ್ನು ವಿವಾಹವಾಗಿದ್ದ ವಿನೋದಮ್ಮ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದರು. ಗಂಡು ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ಆತ ಶಿವಮ್ಮ ಎಂಬವರನ್ನು ಎರಡನೇ ಮದುವೆಯಾಗಿದ್ದ. ಅವರಿಗೆ ಒಂದು ಗಂಡು ಜನಿಸಿತ್ತು.

ಹೆಣ್ಣು ಮಕ್ಕಳಿಗೆ ಆಸ್ತಿ ಕೊಡುವ ಹಾಗೂ ಸಾಂಸಾರಿಕ ವಿಷಯಗಳಿಗೆ ಸಂಬಂಧಿಸಿದಂತೆ ವಿನೋದಮ್ಮ ಅವರೊಂದಿಗೆ ಲಕ್ಷ್ಮಣ ಜಗಳವಾಡಿ ಪದೇ ಪದೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಸಂಬಂಧ ಕುಟುಂಬಸ್ಥರು ಸಂಧಾನ ನಡೆಸಿ ತಿಳಿ ಹೇಳಿದ್ದರು.

ಆದರೂ ತನ್ನ ಚಾಳಿ ಬಿಡದ ಲಕ್ಷ್ಮಣ, 2019ರ ಜುಲೈ 22ರಂದು ವಿನೋದಮ್ಮ ಅವರ ಮನೆ ಬಳಿ ಬಂದು ಜಗಳ ತೆಗೆದು, ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆಗೈದಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಗಂಡಸಿ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಐಪಿಸಿ ಕಲಂ 498(ಎ), 302 ರಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಎಸ್.ಎ. ಹಿದಾಯತ್ ಉಲ್ಲಾ ಷರೀಫ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಜೀವ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂ.‌ದಂಡ ವಿಧಿಸಿ ಅ 25ರಂದು ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ನಾಗೇಂದ್ರ ವಾದ ಮಂಡಿಸಿದ್ದರು.