ಭಾರಿ ಮಳೆ ಎಫೆಕ್ಟ್; ಉಕ್ಕೇರುತ್ತಿದೆ ಐತಿಹಾಸಿಕ ದ್ವಾರ ಸಮುದ್ರ ಕೆರೆ

ಹಾಸನ: ಐತಿಹಾಸಿಕ ದ್ವಾರಸಮುದ್ರ ಕೆರೆಯ ಹೊರಹರಿವು ದಿಢೀರ್ ಹೆಚ್ಚಳವಾಗಿದ್ದು, ಕೋಡಿ ಉಕ್ಕಿ ಹರಿಯುತ್ತಿದೆ.

ಜುಲೈ ತಿಂಗಳ ಮುಂಗಾರು ಮಳೆಯ ಆರ್ಭಟದ ಪರಿಣಾಮ ಮೂರು ತಿಂಗಳಿಂದ ತುಂಬಿ ಹರಿಯುತ್ತಿರುವ ಹಳೇಬೀಡಿನ ಐತಿಹಾಸಿಕ ದ್ವಾರಸಮುದ್ರ ಕೆರೆಯ ಹೊರ ಹರಿವು ಸೋಮವಾರ ಸುರಿದ ಭಾರಿ ಮಳೆಯ ಕಾರಣ ಮಂಗಳವಾರ ಮುಂಜಾನೆಯಿಂದ ದಿಢೀರ್ ಏರಿಕೆಯಾಗಿದೆ.

ಕೆಂಪು ನೀರು ಕೋಡಿಯಿಂದ ಅಪಾರ ಪ್ರಮಾಣದಲ್ಲಿ ಹರಿದು ಹೋಗುತ್ತಿದೆ. ಸೋಮವಾರ ಸಂಜೆ ಹಳೇಬೀಡು ಸುತ್ತ ಮೂರು ಗಂಟೆಗೂ ಅಧಿಕ ವೇಳೆ ಸಾಧಾರಣ ಮಳೆ ಸುರಿಯಿತು. ಆದರೆ, ದ್ವಾರಸಮುದ್ರ ಕೆರೆಗೆ ನೀರು ಹರಿದು ಬರುವ ಸೀಗೆ ಗುಡ್ಡ ಹಾಗೂ ಕಾಗೆದಳ್ಳದ ವ್ಯಾಪ್ತಿಯಲ್ಲಿ ಭಾರಿ ಮಳೆಯಾದ ಕಾರಣ ಕೆರೆಗೆ ಅಪಾರ ಪ್ರಮಾಣದಲ್ಲಿ ಕೆಂಪು ನೀರು ಹರಿದು ಬರುತ್ತಿದೆ.

ಅಷ್ಟೇ ನೀರು ಹೊರಗೆ ಹೋಗುತ್ತಿದೆ. ಬೆಳವಾಡಿ ಗ್ರಾಮ ಸೇರಿದಂತೆ ಪಾತ್ರದ ಮುಂದಿನ ಕೆರೆಗಳೆಲ್ಲ ಈಗಾಗಲೇ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರು ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರವನ್ನು ಸೇರುತ್ತಿದೆ.