ಪ್ರಜ್ವಲ್ ರೇವಣ್ಣಗೆ ಪ್ರೀತಂಗೌಡ ಟೀಂ ಸೆಡ್ಡು; ನಾಮಪತ್ರಕ್ಕೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಕೃಷ್ಣ ಹೋಟೆಲ್ ಕಿರಣ್ ಗೌಡ

ಸಿದ್ದೇಶ್ವರ ದೇವಾಲಯದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದ ಕಿರಣ್

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿಯಲ್ಲಿ ಬಂಡಾಯದ ಬಿಸಿ ಏರುತ್ತಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಅಂತಃಕಲಹ ಬೀದಿಗೆ ಬಂದಿದೆ.

ಜೆಡಿಎಸ್ ನಾಯಕರಿಗೆ ತಿರುಗೇಟು ಕೊಡಲು ಸಜ್ಜಾದ ಪ್ರೀತಂಗೌಡ ಟೀಂ ಜೆಡಿಎಸ್ ಅಭ್ಯರ್ಥಿಗೆ ಪರ್ಯಾಯವಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಕಿರಣ್ ಗೌಡ ಅವರನ್ನು ಪ್ರಚಾರದ ಅಖಾಡಕ್ಕಿಳಿಸಿದ್ದಾರೆ.

ಅಧಿಕೃತವಾಗಿ ಜಿಲ್ಲಾಮಟ್ಟದಲ್ಲಿ ಮೈತ್ರಿ ಮಾತುಕತೆ ನಡೆಯದ ಹಿನ್ನೆಲೆಯಲ್ಲಿ ಎಚ್.ಪಿ.ಕಿರಣ್ ಗೌಡ ನಾಮಪತ್ರ ಅರ್ಜಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅತ್ಯಾಪ್ತರಾಗಿ ಗುರುತಿಸಿಕೊಂಡಿರುವ‌ಕಿರಣ್‌ಕುಮಾರ್ ಇಂದು ತಮ್ಮ ಬೆಂಬಲಿಗರ ಜತೆ ಹಾಸನದ ಸಿದ್ದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಜೆಡಿಎಸ್ ನಾಯಕರಿಗೆ ಸ್ಥಳೀಯ ಬಿಜೆಪಿ ಮುಖಂಡರ ನಡೆ ತಲೆನೋವಾಗಿ ಪರಿಣಮಿಸಿದೆ.

ಈ ಮೂಲಕ ಜಿಲ್ಲೆಯ ಪ್ರಭಾವಿ ನಾಯಕ ಪ್ರೀತಂಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರಚಾರ ಶುರು ಮಾಡಿರುವ ಜೆಡಿಎಸ್ ಆಭ್ಯರ್ಥಿ ಸಂಸದ ಪ್ರಜ್ವಲ್ ನಡೆಗೆ ತಿರುಗೇಟು ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಮೈತ್ರಿ ಅಭ್ಯರ್ಥಿ ಇನ್ನೂ ಘೋಷಣೆ ಆಗಿಲ್ಲ ಎಂದು ಪ್ರಚಾರ ಶುರುಮಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಡೆ ತೀವ್ರ ಕುತೂಹಲ ಮೂಡಿಸಿದೆ.