ಹಾಸನ ನಗರದಲ್ಲಿ ಬಿರುಗಾಳಿ-ಮಳೆ ಆರ್ಭಟಕ್ಕೆ ಜನ ತತ್ತರ: ಜಿಲ್ಲೆಯ ಹಲವೆಡೆ ತಂಪೆರೆದ ವರುಣ

ಹಾಸನ: ನಗರದಲ್ಲಿ ಸಂಜೆ ಭಾರಿ ಬಿರುಗಾಳಿ ಸಿಡಿಲಿಗಳೊಂದಿಗೆ ವರ್ಷದ ಮೊದಲ ಮಳೆ ಆರ್ಭಟಿಸಿತು. ಸುಂಟರಗಾಳಿ ಆತಂಕ ಸೃಷ್ಟಿಸಿದರೂ ವರುಣ ಬೇಸಿಗೆ ಝಳದಿಂದ ತತ್ತರಿಸಿದ್ದ ಜನರ ಮೈಮನಗಳಿಗೆ ತಂಪೆರೆಯಿತು.

ಸಂಜೆ 6.45ರ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಎದ್ದ ಬಿರುಗಾಳಿ ನಗರದ ಹಲವು ಬಡಾವಣೆಗಳಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತು.

ತರಗೆಲೆ ಮಿಶ್ರಿತ ಧೂಳಿನ ಬಿರುಗಾಳಿಯಿಂದ ಮರ, ಗಿಡಗಳು ಓಲಾಡಿದವು. ಮರದ ಎಲೆ, ಕಾಯಿಗಳು ಉದುರಿ ರಸ್ತೆ ತುಂಬೆಲ್ಲ ಬಿದ್ದವು. ದ್ವಿಚಕ್ರ ವಾಹನ ಸವಾರರು ಭಯಭೀತರಾಗಿ ರಸ್ತೆಯಲ್ಲೇ ವಾಹನ ನಿಲ್ಲಿಸಿ ರಕ್ಷಣೆಗೆಂದು ಸಮೀಪದ ಕಟ್ಟಡಗಳ ಕಡೆಗೆ ಓಡಿದರು.

ಬಿರುಗಾಳಿ ಶಾಂತವಾದ ಬೆನ್ನಿಗೇ ಬಿರುಸಿನ ಮಳೆ ಆರಂಭವಾಯಿತು. ಕೇವಲ ಹತ್ತು ನಿಮಿಷಗಳ ಕಾಲ ಆರ್ಭಟಿಸಿದ ಮಳೆಯಿಂದ ನಗರ ತಂಪಾಯಿತು.

ಮುರಿದ ಬಿದ್ದ ಮರ:
ನಗರದ ಶಂಕರಮಠದ ಆವರಣದಲ್ಲಿ ಭಾರಿ ಗಾಳಿಗೆ ಸಿಲುಕಿ ಸಂಪಿಗೆ ಮರವೊಂದು ಮುರಿದು ಬಿದ್ದಿದೆ. ಮಠದ ಆವರಣದಲ್ಲಿ ಭಜನೆಯಲ್ಲಿ ತೊಡಗಿದ್ದ ಹಲವು ಮಹಿಳೆಯರು‌ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದರು.

ಜಿಲ್ಲೆಯಲ್ಲಿ ಮೊದಲ ಮಳೆ:

ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆ ಸುರಿದಿದ್ದು, ಜನರಲ್ಲಿ ಹರ್ಷ ಮೂಡಿಸಿದೆ. ವಿಶೇಷವಾಗಿ ಸಕಲೇಶಪುರ ತಾಲ್ಲೂಕಿನ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ಶುಕ್ರವಾರ ಸಂತೆ ಸುತ್ತಮುತ್ತ ವರುಣ ಕೃಪೆ ತೋರಿದ್ದಾನೆ.

ಬಿಸಿಲ ಬೇಗೆಗೆ ತತ್ತರಿಸಿದ್ದ ಜನತೆ ಹಾಗೂ ರೈತರಿಗೆ ಈ ಮಳೆ ತಂಪೆರೆದಿದ್ದು, ಭೂಮಿಗೂ ಚೈತನ್ಯ ತಂದಿದೆ. ಮುಂಗಾರು ಪೂರ್ವ ಮಳೆ ಆರಂಭವಾಗಿರುವುದು ಕೃಷಿಕರಿಗೆ ಆಶಾದಾಯಕವಾಗಿದೆ.