ಹಾಸನ: ಗೌರ್ನರ್ ಕೇಂದ್ರ ಸರ್ಕಾರದ ಏಜೆಂಟ್‌ರ ರೀತಿ ವರ್ತಿಸುತ್ತಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ಅಪವಿತ್ರ ಮಾಡುತ್ತಿದ್ದಾರೆ ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯಪಾಲರು, ಬಿಜೆಪಿ, ಜೆಡಿಎಸ್ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿ ರಾಜಕೀಯ ಷಡ್ಯಂತ್ರ ನಡೆತಿದೆ. ರಾಜ್ಯಪಾಲರು ಮುಖ್ಯಮಂತ್ರಿಗಳ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಅವರು ಬಿಜೆಪಿ ಕೈಗೊಂಬೆಯಾಗಿ, ರಾಜ್ಯಪಾಲರ ಕಚೇರಿಯನ್ನೇ ಬಿಜೆಪಿ ಮುಖಂಡರ ಅಂಗಳವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯಾದ್ಯಂತ ನಾಳೆ ಪ್ರತಿಭಟನೆ ಮಾಡಲು ಕೆಪಿಸಿಸಿ ಅಧ್ಯಕ್ಷರು ಆದೇಶ ನೀಡಿದ್ದಾರೆ. ಬಿಜೆಪಿ-ಜೆಡಿಎಸ್ ಒಕ್ಕೂಟ ಷಡ್ಯಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರು ಯಾವತ್ತೂ ಜನತೆಯ ಬಹುಮತದಿಂದ ಆರಿಸಿ ಬಂದು ಅಧಿಕಾರ ಮಾಡಿಲ್ಲ.
ಪಾದಯಾತ್ರೆ ಮಾಡಿ ವೈಯುಕ್ತಿಕವಾಗಿ ಕಿತ್ತಾಡಿಕೊಂಡು ಮುಗಿಸಿದ್ರು. ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಇಂತಹ ಅಪರಾಧ ಮಾಡಿದ್ದಾರೆ ಅಂತ ಹೇಳಲಿಲ್ಲ.
ರಾಜ್ಯಪಾಲರು ಮೊದಲು ಶೋಕಾಸ್ ನೋಟೀಸ್ ಕೊಟ್ಟರು. ಎಲ್ಲರಿಂದಲೂ ಸಿದ್ದರಾಮಯ್ಯ ಅವರ ಮೇಲೆ ಕೇಸ್ ಹಾಕ್ಸಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಬೊಮ್ಮಾಯಿ ಸಿಎಂ ಆಗಿದ್ದಾಗ ಅನುಮತಿ ಕೊಟ್ಟು ಈಗ ಕೇಸ್ ಹಾಕ್ಸಿದ್ದಾರೆ.
ಒಂದು ಪಿಲಿಮಿನರಿ ತನಿಖೆ ಮಾಡದೆ ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮಸಿ ಬಳೆಯಲು, ಕಪ್ಪು ಚುಕ್ಕೆ ಇಡಲು ಈ ರೀತಿ ಮಾಡುತ್ತಿದ್ದಾರೆ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ದೊಡ್ಡಮಟ್ಟದ ಆಂದೋಲನ ಆರಂಭವಾಗುತ್ತೆ.
ಬಿಜೆಪಿಯವರು ಸರ್ಕಾರ ಅತಂತ್ರಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅವರ ಆಸೆ ಈ ಬಾರಿ ಈಡೇರಲ್ಲ. ನಾಳೆ ಹಾಸನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಡಲಿದೆ ಎಂದರು.