ಹಾಸನ, ಮಾ. 16: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಮೂರು ಪುಂಡಾನೆಗಳ ಸೆರೆಗೆ ಅನುಮತಿ ನೀಡಿದ್ದು, ಇಂದಿನಿಂದ ಅಧಿಕೃತ ಕಾರ್ಯಾಚರಣೆ ಪ್ರಾರಂಭವಾಗಿದೆ.
ಬೇಲೂರು ತಾಲ್ಲೂಕಿನ ಬಿಕ್ಕೋಡು ಕ್ಯಾಂಪಿಗೆ ಈಗಾಗಲೇ ಮತ್ತಿಗೋಡು ಮತ್ತು ದುಬಾರೆ ಶಿಬಿರಗಳಿಂದ ಏಳು ಸಾಕಾನೆಗಳು ಆಗಮಿಸಿವೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಭೀಮ, ಕಂಜನ್, ಪ್ರಶಾಂತ, ಹರ್ಷ, ಧನಂಜಯ, ಮಹೇಂದ್ರ ಮತ್ತು ಏಕಲವ್ಯ ಭಾಗವಹಿಸಲಿವೆ.
ಕಾರ್ಯಾಚರಣೆಗೂ ಮುನ್ನ, ಸ್ಥಳೀಯ ಶಾಸಕ ಎಚ್.ಕೆ. ಸುರೇಶ್, ತಹಸೀಲ್ದಾರ್ ಮಮತಾ, ಮತ್ತು ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಪೂಜೆ ಸಲ್ಲಿಸಲಾಗುವುದು. ಅರಣ್ಯ ಇಲಾಖೆ ವಿಶೇಷ ಕಾರ್ಯತಂಡ (ETF) ಸಿಬ್ಬಂದಿ ಈಗಾಗಲೇ ಪುಂಡಾನೆಗಳನ್ನು ಗುರುತಿಸಲು ಕಾಡಿಗೆ ತೆರಳಿದ್ದಾರೆ.
ಇತ್ತೀಚೆಗೆ 20 ದಿನಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ನಾಲ್ವರು ಕಾಡಾನೆ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅರಣ್ಯ ಇಲಾಖೆ ತಾತ್ಕಾಲಿಕ ನಿರ್ವಹಣಾ ಕ್ರಮಗಳನ್ನು ಕೈಗೊಂಡಿದ್ದು, ಸೆರೆ ಕಾರ್ಯಾಚರಣೆ ಜನರಲ್ಲಿನ ಪುಂಡಾನೆ ಭೀತಿ ಕಡಿಮೆ ಮಾಡಲು ಮುಂದಾಗಿದೆ.
ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿದರೆ, ಈ ಪ್ರದೇಶದ ನಿವಾಸಿಗಳಿಗೆ ತಾತ್ಕಾಲಿಕ ಉಪಶಮನ ಲಭಿಸುವ ನಿರೀಕ್ಷೆಯಿದೆ.