ಒಂಟಿ ಸಲಗ ಭೀಮನಿಗೆ ಹೊಸ ಫ್ರೆಂಡ್ ಈ ಮರಿಯಾನೆ? ಭೀಮನಿಂದ ಜ್ಯೂನಿಯರ್ ಗೆ ಟ್ರೈನಿಂಗ್!

ಹಾಸನ, ಮೇ 25, 2025: ಸದಾ ಒಂಟಿಯಾಗಿ ನಡೆಯುತ್ತಾ ರಾಜಗಾಂಭೀರ್ಯದ ಕಾರಣಕ್ಕಾಗಿ ಫ್ಯಾನ್ ಬೇಸ್ ಸಂಪಾದಿಸಿರುವ ದೈತ್ಯ ಕಾಡಾನೆ ಭೀಮ ಈಗ ಮರಿಯಾನೆಯೊಂದನ್ನು ಜತೆಗಾರನಾಗಿ ಆರಿಸಿಕೊಂಡಿದ್ದು, ಈ ಬೆಳವಣಿಗೆ ಅಚ್ಚರಿ ಮೂಡಿಸಿದೆ.

ಸಕಲೇಶಪುರ ತಾಲ್ಲೂಕಿನ ಉದೇವಾರ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಯ ನಡುವೆಯೂ ದೈತ್ಯಾಕಾರದ ಕಾಡಾನೆ ಭೀಮ ಒಂದು ಆನೆ ಮರಿಯೊಂದಿಗೆ ಆಹಾರ ಅರಸಿ ಕೆ.ಎಚ್. ಬಸವರಾಜು ಎಂಬುವವರ ಮನೆಯ ಬಾಗಿಲಿಗೆ ಬಂದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಬೆಳ್ಳಂಬೆಳಗ್ಗೆ ಕಾಡಾನೆಗಳು ಮನೆಯ ಬಳಿ ನಿಂತಿರುವುದನ್ನು ಕಂಡ ಬಸವರಾಜು ಕುಟುಂಬಸ್ಥರು ಭಯಭೀತರಾದರು. ಕಾಡಾನೆಗಳ ಆಗಮನವನ್ನು ಗಮನಿಸಿದ ಮನೆಯವರು ಕಿಟಕಿಯಿಂದ ಕೂಗಿದ ತಕ್ಷಣ, ಭೀಮ ಮರಿಯಾನೆಯೊಂದಿಗೆ ನಿಧಾನವಾಗಿ ಕಾಡಿನತ್ತ ವಾಪಸ್ ತೆರಳಿತು. ಈ ಘಟನೆಯ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಮರಿಯಾನೆ ಜತೆ ಭೀಮನ ವಾಕಿಂಗ್

ಕಾಡಾನೆಯ ಈ ಚಲನವಲನ ಗ್ರಾಮಸ್ಥರಲ್ಲಿ ಆತಂಕವನ್ನುಂಟುಮಾಡಿದೆ.

ಆರ್.ಎಫ್.ಒ.ಭೇಟಿ:

ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಹಾಗೂ ಇಟಿಎಫ್ ಸಿಬ್ಬಂದಿ ಭೀಮ ಕಾಡಾನೆ ಮರಿಯಾನೆ ಜತೆ ಬಂದಿದ್ದ ದಿನೇಕೆರೆ ಗ್ರಾಮದ ಬಸವರಾಜ್ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಇಟಿಎಫ್ ಸಿಬ್ಬಂದಿ  (ಭೀಮ)ಕಾಡಾನೆಯ ಚಲನ ವಲನ ಬಗ್ಗೆ ನಿಗಾಯಿರಿಸಿದ್ದಾರೆ ಎಂದು ಆರ್.ಎಫ್.ಒ. ಹೇಳಿದರು.