ಹಾಸನ: ಬೇಲೂರು ತಾಲ್ಲೂಕಿನ ವಾಟೀಹಳ್ಳಿ ಗ್ರಾಮದಲ್ಲಿ “ಆಪರೇಷನ್ ವಿಕ್ರಾಂತ್” ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ವಿಕ್ರಾಂತ್‌ನನ್ನು ಸೆರೆಹಿಡಿಯು ಶತಪ್ರಯತ್ನಕ್ಕೆ ಭೀಮ ಅಡ್ಡಿಯಾಗಿ ನಿಂತಿದ್ದಾನೆ!
ಹೌದು, ಕಾರ್ಯಾಚರಣೆಗೆ ತಿರುವು ನೀಡುವಂತೆ ಭೀಮ ಆನೆ ದಿಢೀರ್ ಪ್ರವೇಶಿಸಿ ಮತ್ತಷ್ಟು ಸವಾಲು ಒಡ್ಡಿದೆ. ವಿಕ್ರಾಂತ್‌ಗೆ ಅರವಳಿಕೆ ಚುಚ್ಚುಮದ್ದು ನೀಡಲು ತೆರಳಿದ್ದ ವೈದ್ಯರ ತಂಡಕ್ಕೆ ಭೀಮನ ಆಗಮನ ಆಘಾತ ತಂದಿತು. ಈ ವೇಳೆ ವಿಕ್ರಾಂತ್‌ನಿಂದ ಭೀಮನನ್ನು ಬೇರ್ಪಡಿಸಲು ವೈದ್ಯರು ಭೀಮನಿಗೆ ಅರವಳಿಕೆ ಚುಚ್ಚುಮದ್ದು ನೀಡಿದರು.
ಆದರೆ, ಚುಚ್ಚುಮದ್ದು ಪರಿಣಾಮದಿಂದ ಭೀಮ ನಿತ್ರಾಣಗೊಂಡು ಕೆಳಗೆ ಬಿದ್ದಿತು. ಈ ಅವಕಾಶವನ್ನು ಬಳಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಭೀಮನಿಗೆ ರೇಡಿಯೋ ಕಾಲರ್ ಹಾಕಲು ಯತ್ನಿಸಿದರು. ಆದರೆ, ಭೀಮ ತಲೆಯಾಡಿಸುತ್ತಿದ್ದರಿಂದ ರೇಡಿಯೋ ಕಾಲರ್ ಹಾಕುವ ಪ್ರಯತ್ನ ವಿಫಲವಾಯಿತು.
ಅಂತಿಮವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಿಂದೆ ಸರಿಯಿತು. ಭೀಮನಿಗೆ ರಿವರ್ಸಲ್ ಇಂಜೆಕ್ಷನ್ ನೀಡಿ ವೈದ್ಯರು ಹೊರಬಂದರು.ಇತ್ತ, ವಿಕ್ರಾಂತ್‌ಗೆ ಅರವಳಿಕೆ ಚುಚ್ಚುಮದ್ದು ನೀಡಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಮುಂಜಾನೆಯಿಂದಲೂ ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ ವಿಕ್ರಾಂತ್‌ನ ಬೆನ್ನುಹತ್ತಿದ್ದಾರೆ.
ಆದರೆ, ಮಧ್ಯಾಹ್ನವಾದರೂ ವಿಕ್ರಾಂತ್ ಒಂದೆಡೆ ನಿಲ್ಲದೆ ಸತತವಾಗಿ ಚಲಿಸುತ್ತಿದೆ. ಮೂರು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಶತಾಯಗತಾಯ ಪ್ರಯತ್ನಿಸುತ್ತಿದ್ದರೂ, ವಿಕ್ರಾಂತ್ ಸೆರೆಗೆ ಒಳಗಾಗಿಲ್ಲ.ಕಾರ್ಯಾಚರಣೆಯಲ್ಲಿ ಮೂರು ದಿನಗಳಿಂದ ಸಿಬ್ಬಂದಿಯೊಂದಿಗೆ ಭಾಗವಹಿಸಿರುವ ಸೌರಭ್‌ಕುಮಾರ್, ತಂಡದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮತ್ತು ಆತಂಕ ಮೂಡಿಸಿದ್ದು, ಮುಂದಿನ ಬೆಳವಣಿಗೆಯತ್ತ ಎಲ್ಲರ ಚಿತ್ತ ನೆಟ್ಟಿದೆ.