ಹಾಸನ: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ, ನಾಡಿಗೆ ಎದುರಾಗಿರುವ ಬರಗಾಲ ಪರಿಸ್ಥಿತಿ, ನಮ್ಮ ಶಾಸಕರ ಮೇಲೆ ನಡೆಯುತ್ತಿರುವ ಗದಾ ಪ್ರಹಾರ, ಹಾಗೂ ಭಯದ ವಾತಾವರಣ ತಿಳಿಗೊಳಿಸಲು ಹಾಸನದಲ್ಲಿ ಜೆಡಿಎಸ್ ಶಾಸಕರ ಸಭೆ ಕರೆಯಲಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಹಾಸನಾಂಬೆ ದರ್ಶನ ನಂತರ ಮಾತನಾಡಿದ ಅವರು, ನಮ್ಮ ಶಾಸಕರಿಗೆ ಇಲ್ಲ ಸಲ್ಲದ ಆಸೆ ಆಮಿಷ ಒಡ್ಡಿ, ಸಾರ್ವಜನಿಕವಾಗಿ ಅನುಮಾನ ಬರುವ ರೀತಿ ಮಾಡಲಾಗುತ್ತಿದೆ. ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ರವಾನೆ ಮಾಡುವುದು ಸಭೆಯ ಪ್ರಮುಖ ಉದ್ದೇಶ ಎಂದು ಹೇಳಿದರು.
ಇದರ ಜೊತೆಗೆ ಶಾಸಕರ ಮನಸ್ಸು ಗಟ್ಟಿ ಮಾಡುವುದೂ ಇದರಲ್ಲಿ ಸೇರಿದೆ. ಹಾಸನ ನೆಲದ ಮಣ್ಣು ನಮ್ಮ ತಂದೆಯವರನ್ನು ದೆಹಲಿವರೆಗೂ ಬೆಳೆಸಿದೆ. ಈ ಮಣ್ಣಿನಿಂದಲೇ ನಾವೆಲ್ಲರೂ ಒಂದಾಗಿದ್ದೇವೆ, ನಮ್ಮ ಯಾರೂ ಅಲುಗಾಡಿಸಲು ಆಗಲ್ಲ ಎಂಬುದನ್ನು ವಿರೋಧಿಗಳಿಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.