ಹಾಸನ: ಎರಡನೇ ದಿನವೂ ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಮತ್ತೊಂದು ಆನೆಯನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಲಾಗಿದೆ.
ಬೇಲೂರು ತಾಲೂಕಿನ ಹೊಸಹಳ್ಳಿ ಸಮೀಪದ ಮಾಳ ಕಾಫಿ ಎಸ್ಟೇಟ್‌ನಲ್ಲಿ ಆರು ಪಳಗಿದ ಆನೆಗಳ ಸಹಾಯದಿಂದ ಸಲಗನನ್ನು ಖೆಡ್ಡಾಕ್ಕೆ ಕೆಡವಿ ನಂತರ ರೇಡಿಯೋ ಕಾಲರ್ ಅಳವಡಿಸಲಾಗಿದೆ.
ಬೆಳಗ್ಗೆ ೧೦ ಗಂಟೆಯಿoದಲೂ ಸಲಗನ ಸೆರೆಗೆ ಅರಣ್ಯ ಇಲಾಖೆ ಹರಸಾಹಸ ಪಟ್ಟರು. ಅರವಳಿಕೆ ಚುಚ್ಚುಮದ್ದು ನೀಡಿದರೂ, ಬೀಳದ ಸಲಗ ಎಲ್ಲೆಂದರಲ್ಲಿ ಓಡಾಡಲು ಆರಂಭಿಸಿತು. ಪಳಗಿನ ಆನೆಗಳು ಸಲಗನನ್ನು ಬೆನ್ನಟ್ಟಿದವು. ಮಧ್ಯಾಹ್ನದ ವೇಳೆಗೆ ಸಲಗ ಪ್ರಜ್ಞೆ ತಪ್ಪಿ ಬಿದ್ದಿತು. ಕಾಡಾನೆಯನ್ನು ಸೆರೆಹಿಡಿದಿರುವ ಅರಣ್ಯ ಇಲಾಖೆ ಬೇರೆಡೆಗೆ ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ನಿನ್ನೆ ಒಂದು ಹೆಣ್ಣಾನೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿದ್ದ ಇಲಾಖೆ, ಇಂದು ಪುಂಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುತ್ತಿದೆ. ಈ ಮೂಲಕ ಆರು ಸಾಕಾನೆಗಳ ಸಹಾಯದಿಂದ ನಾಲ್ಕು ಗಂಟೆಗೂ ಹೆಚ್ಚು ಹೊತ್ತು ನಡೆಸಿದ ಆಪರೇಷನ್ ಫಲ ನೀಡಿದೆ.
೨೫ ಕ್ಕೂ ಹೆಚ್ಚು ಆನೆಗಳ ಗುಂಪಿನಲ್ಲಿದ್ದ ಒಂದು ಗಂಡಾನೆಗೆ ಅರವಳಿಕೆ ಮದ್ದು ನೀಡಿ, ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯಲಾಯಿತು. ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಿಸಿಎಫ್ ರವಿಶಂಕರ್, ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ ೮೦ ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯವೈಖರಿಗೆ ಸಾರ್ವಜನಿಕರು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.
ಆದರೆ ಕೆಲವೇ ಕಾಡಾನೆಗಳನ್ನ ಹಿಡಿದು ಸ್ಥಳಾಂತರ ಮಾಡಿದರೆ ಸಾಲದು, ನಾವು ಬೆಳೆದ ಬೆಳೆಗಳನ್ನು ನಿತ್ಯ ಹಾಳು ಮಾಡುತ್ತಿರುವ ಎಲ್ಲಾ ಆನೆಗಳನ್ನು ಸ್ಥಳಾಂತರ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಈ ಕಾರ್ಯಾಚರಣೆ ಡಿ.೧೫ ರ ವರೆಗೂ ಮುಂದುವರಿಯಲಿದ್ದು, ಒಟ್ಟು ೯ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಹಾಗೂ ಐದು ಆನೆಗಳನ್ನು ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ.
ಹಲ್ಲೆ ಆರೋಪ:
ಈ ನಡುವೆ ಕಾಡಾನೆಗಳಿವೆ ಹೋಗಬೇಡಿ ಎಂದು ತಡೆದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಬೇಲೂರು ತಾಲೂಕಿನ ಬಿಕ್ಕೋಡು-ಕೆಸಗೋಡು ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಆರ್‌ಆರ್‌ಟಿ ಹಾಗೂ ಇಟಿಎಫ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ, ಅರಣ್ಯ ಇಲಾಖೆಯ ಜೀಪಿನ ಚಕ್ರದ ಗಾಳಿ ತೆಗೆಯಲೂ ಜನರು ಮುಂದಾಗಿದ್ದರು ಎನ್ನಲಾಗಿದೆ. ಜನರನ್ನು ಏಕವಚನದಲ್ಲಿ ನಿಂದಿಸುತ್ತೀರಾ ಎಂದು ಆರೋಪಿಸಿ ಸ್ಥಳೀಯರು ಕೈ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆನೆ ಬಗ್ಗೆ ಮುನ್ಸೂಚನೆ ನೀಡೋ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದುರ್ವರ್ತನೆ ತೋರಿದರು ಎಂದು ಸ್ಥಳೀಯರು ದೂರಿದ್ದಾರೆ.
ಗಜ ಪಡೆ ಪರೇಡ್:
ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹಿಂಡಾನೆಗಳು ಪರೇಡ್ ನಡೆಸಿದ ಘಟನೆ ನಡೆಯಿತು. ಗುಂಪು ಗುಂಪಾಗಿ ಕಾಫಿ ತೋಟದಿಂದ ತೋಟಕ್ಕೆ ೨೫ಕ್ಕೂ ಗಜಪಡೆ ಅಲೆದಾಡುವುದು ಸಾಮಾನ್ಯವಾಗಿತ್ತು. ಇದರಲ್ಲಿ ಮರಿಯಾನೆಗಳೂ ಇದ್ದರು.
ಇದೀಗ ಇದೇ ಒಂದು ಗಂಡಾನೆ ಸೆರೆ ಹಿಡಿದು ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಮತ್ತೊಂದೆಡೆ ರೇಡಿಯೋ ಕಾಲರ್ ಅಳವಡಿಕೆ ಹಾಗೂ ಸ್ಥಳಾಂತರ ಕಾರ್ಯಾಚರಣೆ ಮುಂದುವರಿಯಲಿದೆ.ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.