ಅರ್ಜುನನ್ನು ಕೊಂದ ಕಾಡಾನೆ ಹೆಡೆಮುರಿ ಕಟ್ಟಲು‌ ಬಂದಿಳಿದ ಅಭಿಮನ್ಯು ಪಡೆ; ಕರಡಿ, ಸೀಗೆ, ವಿಕ್ರಾಂತ್, ಪೆನ್ಸಿಲ್ ಕೋರೆ, ಕ್ಯಾಪ್ಟನ್, ಕಾನಳ್ಳಿ ಕುಳ್ಳನಿಗೂ ಸ್ಕೆಚ್

ಇಂದಿನಿಂದ ಏ. 24ರವರೆಗೆ ನಡೆಯಲಿದೆ ಕಾರ್ಯಾಚರಣೆ

ಹಾಸನ : ಹಾಸನ ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಮುಂದಾಗಿರುವ ಅರಣ್ಯ ಇಲಾಖೆಗೆ ಐದು ಪುಂಡಾನೆಗಳನ್ನು ಸೆರೆ ಹಿಡಿದು ರೆಡಿಯೋ‌ ಕಾಲರ್ ಅಳವಡಿಸಿ ಸ್ಥಳಾಂತರಿಸಲು ಅನುಮತಿ ದೊರಕಿದೆ.

ಉಪಟಳ ನೀಡುತ್ತಿರುವ,‌ ಮಾನವ ಹತ್ಯೆ ನಡೆಸಿರುವ ಅಕ್ರಮಣಕಾರಿ ಆನೆಗಳನ್ನು ಹಿಡಿದು ಸ್ಥಳಾಂತರಿಸುವಂತೆ ಕಾಡಾನೆ ಹಾವಳಿಪೀಡಿತ ಪ್ರದೇಶದ ಜನರ ಒತ್ತಾಯ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವನ್ಯಜೀವಿ ಪರಿಪಾಲಕ ಸುಭಾಷ್ ಮಾಲ್ಕಡೆ ಪುಂಡಾನೆ ಸೆರೆ ಕಾರ್ಯಾಚರಣೆಗೆ ಅನುಮತಿಸಿದ್ದಾರೆ.

ಇಂದಿನಿಂದ ಏ.24 ರವರೆಗೆ ನಡೆಯಲಿರುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಏಳು ಸಾಕಾನೆಗಳು ಭಾಗಿಯಾಗಲಿವೆ.

ಬೇಲೂರು ತಾಲ್ಲೂಕಿನ ಬಿಕ್ಕೋಡು ಬಳಿ ತೆರೆದಿರುವ ತಾತ್ಕಾಲಿಕ ಶಿಬಿರಕ್ಕೆ ಅಭಿಮನ್ಯು, ಧನಂಜಯ, ಹರ್ಷ, ಪ್ರಶಾಂತ, ಸುಗ್ರೀವ, ಕರ್ನಾಟಕ ಭೀಮಾ, ಮಹೇಂದ್ರ ಎಂಬ ಸಾಕಾನೆಗಳು ಬಂದಿಳಿದಿವೆ.

ಈ ಬಾರಿ ನರಹಂತಕ ಹಾಗೂ ಹೆಚ್ಚು ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಯನ್ನೇ ಗುರಿಯಾಗಿರಿಸಿಕೊಳ್ಳಲಾಗುತ್ತಿದೆ. ಅದರಂತೆ ನರಹಂತಕ ಕರಡಿ, ಸೀಗೆ, ವಿಕ್ರಾಂತ್, ಪೆನ್ಸಿಲ್ ಕೋರೆ, ಕ್ಯಾಪ್ಟನ್, ಕಾನಳ್ಳಿ ಕುಳ್ಳ ಹೆಸರಿನ ಕಾಡಾನೆಗಳು ಹಾಗೂ ಅರ್ಜುನನ್ನು ಕೊಂದ ಕಾಡಾನೆ ಸೆರೆ ಹಿಡಿಯಲಾಗುವುದು.

ಇಂದು ನರಹಂತಕ ಕರಡಿ ಕಾಡಾನೆಯನ್ನು ಸೆರೆ ಹಿಡಿಯಲು ಸಿದ್ಧತೆ ನಡೆದಿದ್ದು, ಕರಡಿ ಹಿರೇಗರ್ಜೆ ಸುತ್ತಮುತ್ತ ಓಡಾಡುತ್ತಿರುವುದರಿಂದ ಅಲ್ಲಿಯೇ ಕಾರ್ಯಾಚರಣೆ ಆರಂಭವಾಗಲಿದೆ.