ಹಾಸನ, ಮಾರ್ಚ್ 18: ಬೇಲೂರು ತಾಲ್ಲೂಕಿನ ಕಾನನಹಳ್ಳಿ ಗ್ರಾಮದಲ್ಲಿ ಅಲೆಮಾರಿ ಕಾಡಾನೆ ವಿಕ್ರಾಂತ್‌ನನ್ನು ಹಿಡಿಯಲು ನಡೆಸಿದ “ಅಪರೇಷನ್ ವಿಕ್ರಾಂತ್” ಇಂದು ವಿಫಲವಾಗಿದೆ. ವಿಕ್ರಾಂತ್ ಕಾಡಾನೆಯನ್ನು ಗುಂಪಿನಿಂದ ಬೇರ್ಪಡಿಸಲು ಅರಣ್ಯ ಇಲಾಖೆಯ ತಂಡ ಶ್ರಮಿಸಿದರೂ ಸಾಧ್ಯವಾಗದೆ ಕಾರ್ಯಾಚರಣೆ ಮುಂದೂಡಬೇಕಾಯಿತು.
ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಜೊತೆಗೆ ಏಳು ಸಾಕಾನೆಗಳು ಭಾಗವಹಿಸಿದ್ದವು, ವಿಕ್ರಾಂತ್ ಗುಂಪಿನಲ್ಲಿ ಸೇರಿಕೊಂಡು ತಪ್ಪಿಸಿಕೊಂಡಿದೆ. ವೈದ್ಯರು ಕಾಡಾನೆಗೆ ಚುಚ್ಚುಮದ್ದು ನೀಡಲು ಸತತ ಆರು ಗಂಟೆಗಳ ಕಾಲ ಹರಸಾಹಸಪಟ್ಟರು. ಆದರೆ, ಕಾಡಾನೆ ಗುಂಪಿನೊಳಗೆ ಸೇರಿಕೊಂಡಿದ್ದರಿಂದ, ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ಬೆಳಿಗ್ಗೆಯಿಂದಲೇ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹಾಸನ ವಿಭಾಗದ ಡಿಎಫ್‌ಒ ಸೌರಭ್ ಕುಮಾರ್ ಮತ್ತು ಅವರ ತಂಡ ಇಂದು ಸಂಜೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ನಾಳೆಯಿಂದ ಹೊಸ ತಂತ್ರಗಾರಿಕೆಯಲ್ಲಿ ಅಪರೇಷನ್ ಪುನರಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆ ತಂಡದ ಈ ಯತ್ನವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ವಿಕ್ರಾಂತ್‌ನ ನಿಯಂತ್ರಣದ ಕುರಿತಾಗಿ ಇನ್ನೂ ಹೆಚ್ಚು ಪ್ರಯತ್ನ ನಡೆಸಬೇಕಾಗಿರುವುದರಿಂದ, ನಾಳೆಯ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ನಿರೀಕ್ಷೆ ಹುಟ್ಟಿದೆ.