ಬೇಲೂರಿನ ಮರ ಹನನ ಪ್ರಕರಣ: ಪ್ರಭಾವಿಗಳಿಂದ ನಡೆದಿದ್ದ ಲೂಟಿ ತಡೆದ ತಹಸೀಲ್ದಾರ್‌‌ ಮಮತಾ, ಪರ್ಮಿಟ್ ಬಂದ್‌ ಗೆ‌ ಡಿಸಿಎಫ್ ಆದೇಶ

ಪ್ರಕರಣದ ತನಿಖೆ ಮುಗಿಯುವವರೆಗೆ ಎಲ್ಲಾ ರಹದಾರಿ ತಡೆ: ಆರ್‌ಎಫ್‌ಒಗಳಿಗೆ ಡಿಸಿಎಫ್ ಸೂಚನೆ

ಹಾಸನ: ಬೇಲೂರು ತಾಲ್ಲೂಕಿನ ನಂದಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 16ರ
ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ ಬೆಲೆ ಬಾಳುವ ನೂರಾರು ಮರಗಳನ್ನು ಏಕಾಏಕಿ ರಾತ್ರೋರಾತ್ರಿ ಅಕ್ರಮವಾಗಿ ಮರ ಕಡಿದು ಸಾಗಾಟ ಯತ್ನ ಪ್ರಕರಣವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಕೋಟಿ ಕೋಟಿ ಬೆಲೆ ಬಾಳುವ 126 ಮರಗಳನ್ನು ದುಷ್ಕರ್ಮಿಗಳು ಕಡಿದಿದ್ದರು.
ಹಣ ಮಾಡುವ ದುರುದ್ದೇಶದಿಂದ ಮರಗಳನ್ನು ಸಾಮೂಹಿಕವಾಗಿ ಹನನ ಮಾಡಲಾಗಿದೆ ಎನ್ನಲಾಗಿತ್ತು.
ಈ ಹಿನ್ನೆಲೆಯಲ್ಲಿ ಸಾಗಣೆಗೆ ತಡೆಯೊಡ್ಡುವ ಉದ್ದೇಶದಿಂದ ಬೇಲೂರು ಮತ್ತು ಸಕಲೇಶಪುರ ಅರಣ್ಯ ವ್ಯಾಪ್ತಿಯ ಎಲ್ಲಾ ರಹದಾರಿಗಳನ್ನು ಬಂದ್ ಮಾಡುವಂತೆ ಡಿಸಿಎಫ್ ಡಿ.ಮೋಹನ್‌ಕುಮಾರ್ ಸಕಲೇಶಪುರ ಹಾಗೂ ಬೇಲೂರು ಆರ್‌ಎಫ್‌ಒಗಳಿಗೆ ಸೂಚಿಸಿದ್ದಾರೆ.

ಪ್ರಕರಣದ ತನಿಖೆ ಮುಗಿಯುವವರೆಗೆ ಎಲ್ಲಾ ಪರ್ಮಿಟ್‌ ಗಳಿಗೆ ತಡೆ ಒಡ್ಡುವಂತೆ ಸೂಚಿಸಿದ್ದಾರೆ.
ಇದಕ್ಕೂ ಮುನ್ನ ಅಕ್ರಮವಾಗಿ ಮರ ಕಡಿದು ಸಾಗಾಟಕ್ಕೆ ಯತ್ನಿಸಿದ್ದನ್ನು ವಿಫಲಗೊಳಿಸಿದ್ದ ಅರಣ್ಯ ಇಲಾಖೆ ಕೋಟ್ಯಂತರ ರೂ.ಮೌಲ್ಯದ ಮರಗಳನ್ನು ವಶಪಡಿಸಿಕೊಂಡಿತ್ತು.

ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ, ನಂದಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 16 ರಲ್ಲಿ ಬೆಳೆದಿದ್ದ ಹೊನ್ನೆ, ಬೀಟೆ, ಅಂಟ್ವಾಳ, ನಂದಿ, ಹಲಸು ಸೇರಿದಂತೆ ವಿವಿಧ ಜಾತಿಯ ಕೋಟ್ಯಂತರ ರೂ.ಬೆಳೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿಯಲಾಗಿತ್ತು.

ಡಿ.16 ರಂದು ಇದೇ ರಸ್ತೆಯಲ್ಲಿ ತೆರಳುತ್ತಿದ್ದ ಬೇಲೂರು ತಹಸೀಲ್ದಾರ್ ಮಮತಾ ಅವರು, ರಸ್ತೆ ಬದಿ ಮರ ತುಂಡಾಗಿ ಬಿದ್ದಿರುವುದನ್ನು ಕಂಡು ಪರಿಶೀಲನೆ ನಡೆಸಿದ್ದ ವೇಳೆ, ಅಕ್ರಮವಾಗಿ ಕೋಟ್ಯಂತರ ರೂ.ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಲು ಮುಂದಾಗಿರುವುದು ಬೆಳಕಿಗೆ ಬಂದಿತ್ತು.

ಅಂದೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ತಹಸೀಲ್ದಾರ್ ಮಮತಾ, ಪೊಲೀಸ್ ಠಾಣೆಗೂ ದೂರು ನೀಡಿ ಮರಗಳನ್ನು ಸೀಜ್ ಮಾಡಲು ಕ್ರಮ ವಹಿಸಿದ್ದರು. ನಿನ್ನೆ ರಾತ್ರಿ ಡಿಸಿಎಫ್, ಎಸಿಎಫ್ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅರಣ್ಯ ಅಧಿಕಾರಿ ವಿನಯ್‌ಕುಮಾರ್, ಉಪವಲಯ ಅರಣ್ಯ ಅಧಿಕಾರಿ, ಗುರುರಾಜ್, ಅರಣ್ಯ ರಕ್ಷಕ ಅರುಣ್ ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕೃತ್ಯಕ್ಕೆ ಬಳಸಿದ್ದ ಎರಡು ಇಟಾಚಿ, ಎರಡು ಮರ ಕಟ್ ಮಾಡುವ ಮಿಷನ್, ಒಂದು ಟ್ರ್ಯಾಕ್ಟರ್‌ ಟ್ರೇಲರ್ ಹಾಗೂ ಅಪಾರ ಬೆಲೆ ಬಾಳುವ ಮರಗಳನ್ನು ವಶ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ದೊಡ್ಡ ಪ್ರಭಾವಿಗಳು ಭಾಗಿಯಾಗಿರುವ ಅನುಮಾನ ಮೂಡಿದ್ದು, ತನಿಖೆ ನಂತರ ತಿಳಿಯಬೇಕಿದೆ.