ಸಮನ್ವಯ ಸಭೆಯಲ್ಲಿ ಪ್ರೀತಂಗೌಡ ಬೆಂಬಲಿಗರ ಮನವೊಲಿಸಲು ಸಿ.ಟಿ.ರವಿ ನೇತೃತ್ವದಲ್ಲಿ ಶತಪ್ರಯತ್ನ

ಹಾಸನ: ನಗರದ ಹೋಟೆಲ್ ಹಾಸನ್ ಅಶೋಕ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜೆಡಿಎಸ್-ಬಿಜೆಪಿ ಮೊದಲ ಸಮನ್ವಯ ಸಭೆ ಆರಂಭವಾಗಿದೆ.

ಬಿಜೆಪಿ-ಜೆಡಿಎಸ್ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ, ಮಾಜಿಸಚಿವ ಎಚ್.ಡಿ.ರೇವಣ್ಣ, ಶಾಸಕರಾದ ಸ್ವರೂಪ್‌ಪ್ರಕಾಶ್, ಎ.ಮಂಜು, ಮಾಜಿ ಶಾಸಕ‌ ಕೆ.ಎಸ್.ಲಿಂಗೇಶ್, ಬಿಜೆಪಿಯ ಮಾಜಿ ಸಚಿವ ಸಿ.ಟಿ.ರವಿ, ವಿಧಾನ ಪರಿಷತ್ ಉಪಾಸಭಾಪತಿ ಪ್ರಾಣೇಶ್ ಪಾಲ್ಗೊಂಡಿದ್ದಾರೆ.

ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರಿದ್ದು, ಪ್ರೀತಂಗೌಡ ಬೆಂಬಲಿಗರ ಮನವೊಲಿಸಲು ಬಿಜೆಪಿ ಹಿರಿಯ ಮುಖಂಡರು, ಜೆಡಿಎಸ್ ತಂಡ ಹರಸಾಹಸಪಡುತ್ತಿದೆ.

ಆದರೆ ಮೊದಲ ಜೆಡಿಎಸ್-ಬಿಜೆಪಿ ಮೈತ್ರಿ ಸಭೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಗೈರಾಗಿದ್ದಾರೆ. ಇಂದು ಬೆಳಗ್ಗೆ ಪ್ರಜ್ವಲ್ ನಾಮಪತ್ರ ಸಲ್ಲಿಕೆ ವೇಳೆಯೂ ಅವರು ಬಂದಿರಲಿಲ್ಲ.

ಈಗ ಅವರ ರಾಜಕೀಯ ಗುರು ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮೊದಲ ಸಮನ್ವಯ ಸಭೆಗೂ ಬರದೇ ಹೊರಗುಳಿದಿರುವುದರಿಂದ ಅವರನ್ನು ಹೊರತುಪಡಿಸಿ ಅವರ ಬೆಂಬಲಿಗರ ಮನವೊಲಿಸುವ ಯತ್ನ ನಡೆಯುತ್ತಿದೆ.