ಹಾಸನದಲ್ಲಿ ಶುಭಾರಂಭ ಮಾಡಿದ ‘ಕಲ್ಜಿಗ’ ಚಲನಚಿತ್ರ

ಹಾಸನ; ದಕ್ಷಿಣ ಕನ್ನಡದ ಸಂಸ್ಕೃತಿ, ಬದುಕು, ಕೊರಗಜ್ಜ ದೈವದ ಮೇಲಿನ ನಂಬಿಕೆ ಹಾಗೂ ಧರ್ಮ- ಅಧರ್ಮದ ಹಾದಿ ಕುರಿತಾದ ಭಕ್ತಿ ಪ್ರಧಾನ ಚಿತ್ರ ‘ಕಲ್ಜಿಗ’ ಚಲನಚಿತ್ರ ಪ್ರದರ್ಶನವು ಸೆ.27 ರಿಂದ ನಗರದ ‘ಪಿಕ್ಚರ್ ಪ್ಯಾಲೇಸ್’ ಚಿತ್ರಮಂದಿರದಲ್ಲಿ ಆರಂಭವಾಗಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಅದ್ಭುತ ಮೆಚ್ಚುಗೆ ವ್ಯಕ್ತವಾಯಿತು.

‘ಕಲ್ಜಿಗ’ ಚಿತ್ರ ಪ್ರದರ್ಶನಕ್ಕೆ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಅವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಚಲನಚಿತ್ರದ ನಿರ್ಮಾಪಕರಾಗುವುದು ಸುಲಭದ ಮಾತಲ್ಲ. ಉತ್ತಮ ನಿರ್ದೇಶಕರು ಮತ್ತು ಕಲಾವಿದರನ್ನು ಆಯ್ಕೆ ಮಾಡಿ ಚಿತ್ರ ನಿರ್ಮಿಸಿದರೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ಜನರಿಗೆ ತಲುಪಿಸುವುದು ಸಾಹಸದ ಕೆಲಸ. ಅಂತಹ ಕೆಲಸಕ್ಕೆ ಹಾಸನ ಜಿಲ್ಲೆಯರೇ ಆದ ಉದ್ಯಮಿ ಎ.ಕೆ. ಶರತ್ ಕುಮಾರ್ ಅವರು ಮುಂದಾಗಿರುವುದು ಶ್ಲಾಘನೀಯ. ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶಗೌಡ ಮಾತನಾಡಿ, ದಕ್ಷಿಣ ಕನ್ನಡದ ಪ್ರಖ್ಯಾತ ದೈವಗಳಲ್ಲಿ ಒಂದಾದ ಕೊರಗಜ್ಜ ದೈವದ ಕುರಿತಾದ ನಂಬಿಕೆ ಮತ್ತು ಆ ದೈವದ ಶಕ್ತಿ ಬಗ್ಗೆ ಉತ್ತಮ ಕಥೆಯನ್ನು ರೂಪಿಸಿ ಭಕ್ತರ ನಂಬಿಕೆಗೆ ಚ್ಯುತಿ ಬಾರದಂತೆ ‘ಕಲ್ಜಿಗ’ ಚಿತ್ರವನ್ನು ನಿರ್ಮಿಸಲಾಗಿದೆ. ಹಾಸನ ಜಿಲ್ಲೆಯ ಪ್ರತಿಭೆಗಳು ಇತ್ತೀಚೆಗೆ ಕಲಾ ರಂಗದಲ್ಲಿಯೂ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆ. ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹಾಸನ ಜಿಲ್ಲೆ ಮಲ್ಲಿಪಟ್ಟಣದವರಾದ ಎ.ಕೆ. ಶರತ್ ಕುಮಾರ್ ಅವರ ಈ ಕಲಾರಂಗದ ಸಾಹಸಕ್ಕೆ ಜಿಲ್ಲೆಯ ಜನತೆ ಬೆಂಬಲವಾಗಿ ನಿಂತು ಹರಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ‘ಕಲ್ಜಿಗ’ ಚಿತ್ರದ ನಿರ್ಮಾಪಕ ಎ.ಕೆ. ಶರತ್ ಕುಮಾರ್, ನಾಯಕ ನಟ ಅರ್ಜನ್ ಕಾಪಿಕಾಡ್, ನಿರ್ದೇಶಕ ಸುಮನ್ ಸುವರ್ಣ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಲೀಲಾವತಿ ಮತ್ತು ಎಸ್.ಆರ್. ಪ್ರಸನ್ನ ಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಎ.ಆರ್. ವೆಂಕಟೇಶ್ ಮತ್ತು ಮಂಜು ಬನವಾಸೆ, ಹಿರಿಯ ಸಾಹಿತಿಗಳಾದ ಎನ್.ಎಲ್. ಚನ್ನೇಗೌಡ ಮತ್ತು ಗೊರೂರು ಅನಂತರಾಜು, ಅರಸು ಮತ್ತಿತರರು ಉಪಸ್ಥಿತರಿದ್ದರು.