ಹಾಸನ: ನಗರದ ಅಧಿದೇವತೆ ದರ್ಶನೋತ್ಸವಕ್ಕೆ ವೈಭವದ ಸಿದ್ಧತೆ ಮಾಡಿ ಅದನ್ನು ತಮ್ಮ ತವರಿನ ಜನರಿಗೆ ತೋರಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ವಹಿಸಿದ ‘ಅತೀವ ಆಸಕ್ತಿ’ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗಳಿಗೆ ಆಹಾರವಾಗಿ ಬಳಕೆಯಾಗುತ್ತಿದೆ.
ಹೌದು, ಲಕ್ಷಾಂತರ ಲೆಕ್ಕದಲ್ಲಿ ಬೇಕಾಬಿಟ್ಟಿಯಾಗಿ VIP, VVIP ಪಾಸ್ ಗಳನ್ನು ಹಂಚಿಕೆ ಮಾಡಿದ ಜಿಲ್ಲಾಡಳಿತದ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಆ ಟ್ರೋಲ್ ಗಳನ್ನು ಬಳಸಿಕೊಂಡು ಜನರು ಜಿಲ್ಲಾಡಳಿತವನ್ನು ಟೀಕಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಗಳು, ಇನ್ ಫ್ಲೋಯನ್ಸರ್ ಗಳೂ ತಮ್ಮ ವಿಡಿಯೋ ಮೂಲಕ ವಿವಿಐಪಿ ದರ್ಶನದ ಅವಸ್ಥೆಯನ್ನು ತೆರೆದಿಟ್ಟಿದ್ದಾರೆ.

ಶುಕ್ರವಾರ ಅತಿ ಹೆಚ್ಚು ಟ್ರೋಲ್ ಗೆ ಒಳಗಾಗಿರುವುದು, ‘ಜಗತ್ತಿನಲ್ಲಿ ಅತಿ ಹೆಚ್ಚು ವಿವಿಐಪಿಗಳಿರುವ ಊರು ಯಾವುದು ಗೊತ್ತಾ?’ ಎಂಬ ಪ್ರಶ್ನೆ ಮತ್ತು ಅದಕ್ಕೆ ‘ಹಾಸನ!’ ಎನ್ನುವ ಪಂಚಿಂಗ್ ಉತ್ತರ ಹಾಗೂ ಆವರಣದಲ್ಲಿ ಹಾಸನಾಂಬ ದರ್ಶನದ ಕ್ಯೂ ನಲ್ಲಿ ಎನ್ನುವ ವಿವರಣೆ.
https://www.instagram.com/reel/DByaxZqtvoJ/?igsh=ZHBsaDA4b29zdTd4
ಇನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಜನಪ್ರಿಯರಾಗಿರುವ ಸಮರ್ಥ್ ಶೆಟ್ಟಿ ಅವರು ಹಾಸನಾಂಬ ವಿವಿಐಪಿ ದರ್ಶನದ ಸಾಲಿನಲ್ಲಿ ನಿಂತು ದರ್ಶನ ಮಾಡಿದ ಬಗ್ಗೆ ಪೋಸ್ಟ್ ಮಾಡಿರುವ ರೀಲ್ಸ್ ಕೂಡ ವೈರಲ್ ಆಗಿದೆ.
ಇನ್ ಸ್ಟಾಗ್ರಾಂ ಹಾಗೂ ಫೇಸ್ ಬುಕ್ ನಲ್ಲಿ ಭಾರಿ ಖ್ಯಾತಿ ಹೊಂದಿರುವ ಕಿರಿಕ್ ಕುಡ್ಕ ಅಕೌಂಟ್ ನ ರವಿ ಕೂಡ VIP ದರ್ಶನದಲ್ಲಿ ಅನುಭವಿಸಿದ ಹಿಂಸೆಯನ್ನು ತಮ್ಮ ವಿಡಿಯೋದಲ್ಲಿ ವಿವರಿಸಿದ್ದಾರೆ. ಅದಕ್ಕೂ ಫಾಲೋವರ್ಸ್ ರಿಪ್ಲೈ ಸಾಲು ಸಾಲಾಗಿವೆ.
https://www.instagram.com/reel/DBxk7yOv1gP/?igsh=amtod2Jhdnp6N3Jo
ಮೂಲಗಳ ಪ್ರಕಾರ ಜಿಲ್ಲಾಡಳಿತ ಎರಡು ಲಕ್ಷಕ್ಕೂ ಅಧಿಕ ಅತಿಗಣ್ಯರ ಪಾಸುಗಳನ್ನು ಹಂಚಿಕೆ ಮಾಡಿದ್ದು ಅದರ ಪರಿಣಾಮವಾಗಿ ಹಾಸನಾಂಬ ದರ್ಶನದ ವಿವಿಐಪಿ ಕ್ಯೂನಲ್ಲಿ ಸಾವಿರಾರು ಜನರು ನಿಂತು ಗಂಟೆಗಳವರೆಗೆ ಪರದಾಡಿ ದೇವಿ ದರ್ಶನ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದೇ ಕಾರಣಕ್ಕಾಗಿ ಅಧಿಕಾರಿಗಳು, ಸಾರ್ವಜನಿಕ ವಲಯದಿಂದ ಭಾರಿ ಟೀಕೆ ಎದುರಿಸುವಂತಾಗಿದೆ.