ಹೊಯ್ಸಳ ಸಾಮ್ರಾಜ್ಯದ ಆರಂಭವು ಶೌರ್ಯದ ಪರಾಕಾಷ್ಠೆ, ಧರ್ಮ ಮತ್ತು ಕ್ಷಾತ್ರ ಶಕ್ತಿಯ ಸಮ್ಮಿಲನದ ಸಂಕೇತವಾಗಿ ಆರಂಭವಾದರೆ, ಮೋಸ ಹಾಗೂ ಕಪಟತನಗಳ ಸಮ್ಮಿಲನದಿಂದ ಮಹಾನ್ ಹೊಯ್ಸಳ ಸಾಮ್ರಾಟ ಮುಮ್ಮಡಿ ವೀರಬಲ್ಲಾಳನ ಬಲಿದಾನದಿಂದ ಅಂತ್ಯವಾಗುವ(8 ನೇ ಸೆಪ್ಟೆಂಬರ್ 1342) ವಿಚಾರ ಜನಮಾನಸದಿಂದ ಮರೆಯಾಗಿ ಹೋಗಿದೆ.
ಮರೆಯಲೇಬಾರದ ಹೊಯ್ಸಳರ ಮಹಾರಾಜ ಮೂರನೇ ವೀರಬಲ್ಲಾಳ:
1311ರ ಫೆಬ್ರವರಿ ತಿಂಗಳು, ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕನಾದ ಮಲ್ಲಿಕಾಫರ್ , ಹೊಯ್ಸಳ ಸಾಮ್ರಾಟ ಮುಮ್ಮಡಿ ವೀರಬಲ್ಲಾಳನು ರಾಜಧಾನಿಯಿಂದ ದೂರದ ತಿರುಚಿನಾಪಳ್ಳಿಯಲ್ಲಿದ್ದ ಸಮಯದಲ್ಲಿ, ದ್ವಾರ ಸಮುದ್ರದ ಮೇಲೆ ಮುತ್ತಿಗೆ ಹಾಕುತ್ತಾನೆ.
ರಾಜಧಾನಿಗೆ ಅಪಾರ ಹಾನಿ ಉಂಟಾಗುತ್ತದೆ. ಮುಮ್ಮಡಿ ವೀರಬಲ್ಲಾಳನು ರಾಜಧಾನಿ ತಲುಪುವ ವೇಳೆಗೆ ಪರಿಸ್ಥಿತಿ ಕೈಮೀರಿ, ಕಪ್ಪ ಕಾಣಿಕೆಗಳನ್ನು, ಆನೆ ಕುದುರೆಗಳನ್ನು ನೀಡಿ ಸಂಧಿಮಾಡಿಕೊಳ್ಳುತ್ತಾನೆ.
1327ರಲ್ಲಿ ಮತ್ತೊಮ್ಮೆ ಉತ್ತರ ಭಾರತದ ತುಘಲಕ್ ಸೈನ್ಯವು ಹೊಯ್ಸಳರ ರಾಜಧಾನಿ ಮೇಲೆ ಮತ್ತೊಮ್ಮೆ ದಾಳಿ ನಡೆಸಿ ದೇವಾಲಯಗಳು, ವಿಗ್ರಹಗಳು ದಾಳಿಗೊಳಗಾಗಿ, ದ್ವಾರ ಸಮುದ್ರ ನೆಲಸಮವಾಗುತ್ತದೆ.
ತುಗಲಕ್ ನ ಸೈನ್ಯವು ತನ್ನ ದಕ್ಷಿಣದ ದಂಡ ಯಾತ್ರೆಯನ್ನು ಮುಂದುವರೆಸಿ ಮಧುರೈ ಶ್ರೀರಂಗಂ, ರಾಮೇಶ್ವರದವರೆಗೂ ದಾಳಿ ಮಾಡಿ, ಅಪಾರ ಸಂಪತ್ತನ್ನು ದೋಚಿ, ಜಲಾಲುದ್ದೀನ್ ಎಂಬ ಅಧಿಕಾರಿಯನ್ನು ಮದುರೈ ರೆಸಿಡೆಂಟ್ ಆಗಿ ನೇಮಿಸುತ್ತಾರೆ. ಮಧುರೈನಲ್ಲಿ ಸುಲ್ತಾನರ ಆಳ್ವಿಕೆ ಪ್ರಾರಂಭವಾಗುತ್ತದೆ.
ತನ್ನ ಕಣ್ಣೆದುರೇ ರಾಜಧಾನಿಯು ಶತ್ರುಗಳ ದಾಳಿಗೆ ನೆಲಸಮವಾಗಿದ್ದು ಮೂರನೇ ವೀರ ಬಲ್ಲಾಳನ ಆತ್ಮಗೌರವಕ್ಕೆ ಪೆಟ್ಟುಬಿದ್ದು ಸಾಮ್ರಾಜ್ಯಗಳು ಕೇವಲ ತಮ್ಮ ಅಧಿಕಾರಕ್ಕೋಸ್ಕರ ಅಲ್ಲದೆ ಧರ್ಮರಕ್ಷಣೆಗೂ ಇರಬೇಕೆಂದು ಮತ್ತೊಮ್ಮೆ ಸಾಮ್ರಾಜ್ಯವನ್ನು ಪ್ರತಿಷ್ಠಾಪಿಸುವ ಮಹತ್ಕಾರ್ಯಕ್ಕೆ ಕೈಹಾಕುತ್ತಾನೆ. ಆ ಸಮಯದಲ್ಲಿ ದೇವಗಿರಿಯ ಸವಣರು, ವಾರಂಗಲ್ ನ ಕಾಕತೀಯರು, ತಮಿಳಿನ ಪಾಂಡ್ಯರು ಹೀಗೆ ದಕ್ಷಿಣ ಭಾರತದ ಎಲ್ಲಾ ರಾಜಮನೆತನಗಳು ನೆಲಕಚ್ಚಿ ನಿರ್ನಾಮವಾಗಿ, ಹೊಯ್ಸಳ ಸಾಮ್ರಾಜ್ಯ ಒಂದೇ ಅಲ್ಪಸ್ವಲ್ಪ ಜೀವ ಉಳಿಸಿಕೊಂಡಿರುತ್ತದೆ.
ಮಧುರೆಯಲ್ಲಿ ಸುಲ್ತಾನರ ಉಪಟಳ ಹೆಚ್ಚಾಗಿದ್ದು ನಗರವನ್ನು ಕೊಳ್ಳೆಹೊಡೆದು ನರಮೇಧ ಕೊಲೆ, ಸುಲಿಗೆ, ಅತ್ಯಾಚಾರ, ವಿಗ್ರಹ ಬಂಜನೆ ದೇವಾಲಯ ನಾಶ, ತಾಂಡವವಾಡುತ್ತಿದ್ದವು. ಮುಮ್ಮಡಿ ಬಲ್ಲಾಳನು ಹೇಗಾದರೂ ಮಾಡಿ ಸುಲ್ತಾನರಿಂದ ಮದುರೈಯನ್ನು ಬಿಡುಗಡೆ ಗೊಳಿಸಬೇಕೆಂದು ತೀರ್ಮಾನಿಸಿ ಬೃಹತ್ ಸೈನ್ಯ ಸೇರಿಸಿದ. ಅವನ ವಯಸ್ಸು 82 ವರ್ಷ. ತಮಿಳುನಾಡಿನ ಕಣ್ಣಾನೂರಿನ ಕೊಪ್ಪಂ ಎಂಬಲ್ಲಿ ಮಧುರೆ ಸುಲ್ತಾನ ಹಾಗೂ ಮುಮ್ಮಡಿ ಬಲ್ಲಾಳ ನಡುವೆ ಮಹಾ ಕದನವೇ ಏರ್ಪಟ್ಟಿತು. ಯುದ್ಧದಲ್ಲಿ ವೀರಬಲ್ಲಾಳನು ಜಯಶೀಲನಾಗಿ ಸಂದಿಗಾಗಿ ಸಮಯ ಕೇಳಿದಾಗ (14ದಿನ) ವಿಶ್ರಮಿಸುತ್ತಿರುವ ಸಮಯದಲ್ಲಿ ಸುಲ್ತಾನನ ಸೈನ್ಯ ತಡರಾತ್ರಿ ದಾಳಿ ನಡೆಸಿ ಮುಮ್ಮಡಿ ವೀರಬಲ್ಲಾಳನನ್ನು, ಜೀವಂತವಾಗಿ ಹಿಡಿದು ಚರ್ಮವನ್ನು ಸುಲಿದು, ಹೊಟ್ಟೆ ಬಗೆದು ಹೊಟ್ಟೆಯಲ್ಲಿ ಹೂಟ್ಟು ತುಂಬಿ ಮಧುರೈನ ಕೋಟೆಯ ಮೇಲೆ ದೇಹವನ್ನು ತೂಗು ಹಾಕಿದರು. ಭವ್ಯ ಇತಿಹಾಸವಿದ್ದ ಹೊಯ್ಸಳ ಸಾಮ್ರಾಜ್ಯದ ದೊರೆ ವೀರಬಲ್ಲಾಳನ 8ನೇ ಸಪ್ಟೆಂಬರ್ 1342 ರಂದು ಹುತಾತ್ಮನಾದನು.
ಪರ್ಷಿಯನ್ ಇತಿಹಾಸಕಾರ ಈಬಿನ್ನ ಬಟೂಟ ಎಷ್ಟು ದಿನಗಳ ನಂತರವೂ ಕೂಡ ದೇಹವು ಕೋಟೆಯ ಮೇಲೆ ಹಾರಾಡುತ್ತಿದ್ದುದನ್ನು, ಈ ರೀತಿಯ ಕ್ರೌರ್ಯವನ್ನು ನಾನೆಲ್ಲೂ ಕಂಡಿಲ್ಲ ಎಂದು ಬರೆದಿದ್ದಾನೆ.
(ರಾಜಧಾನಿ ದ್ವಾರಸಮುದ್ರ ಪಾಳಾದ ಬೀಡಾಗಿ ಪಾಳುಬೀಡು, ನಂತರ “ಹಳೇಬೀಡು” ಆಯಿತು. )
ಅಬ್ಬಾ! 82 ವರುಷದ ಹೊಯ್ಸಳ ಮಹಾರಾಜನಿಗೆ ಈ ಪರಿ ಧಾರುಣ ಅಂತ್ಯ…..ಹೊಯ್ಸಳ ನರೇಶ ಒಬ್ಬ ವೀರ ಯೋಧ…ನೋವಿನಲ್ಲೂ ಶರಣಾಗದೆ ಸಾವನ್ನು ಸ್ವೀಕರಿಸಿದ…ವೀರೋಚಿತ ಮರಣ 8ನೇ ಸೆಪ್ಟೆಂಬರ್ 1342…ತನ್ನ ಬಲಿದಾನದಲ್ಲೂ ಹೊಯ್ಸಳರ ಶೌರ್ಯ ಸಾಹಸ ಎತ್ತಿ ಹಿಡಿದ….. ತನ್ನ ಅಂತ್ಯದಲ್ಲೂ ದಕ್ಷಿಣ ಭಾರತದ ಇತಿಹಾಸ ಬದಲಿಸಿದ ಎಂದೂ ಮರೆಯಲಾಗದ ಮಹಾನ್ ಸಾಮ್ರಾಟ..ನಮ್ಮ ಮುಮ್ಮಡಿ ವೀರ ಬಲ್ಲಾಳನಿಗೆ ನಮನವಿರಲಿ…..ಮಹಾನ್ ದಿವ್ಯಾತ್ಮಕ್ಕೆ ಭಾವ ಪೂರ್ಣ ಶ್ರದ್ಧಾಂಜಲಿಯಿರಲಿ …….ಹೊಯ್ಸಳ ಸಾಮ್ರಾಜ್ಯಕ್ಕೆ ಜಯವಾಗಲಿ, ಮುಮ್ಮಡಿ ವೀರ ಬಲ್ಲಾಳನಿಗೆ ಜಯವಾಗಲಿ.
–ಲೇಖಕ: ಡಾ.ಎನ್.ರಮೇಶ್, ಶಸ್ತ್ರಚಿಕಿತ್ಸಾ ತಜ್ಞರು