4ವರ್ಷಗಳಿಂದ ಆರಿದ್ದ ವಿದ್ಯುತ್ ದೀಪಗಳನ್ನು ಬೆಳಗಿಸಿದ ನಗರಸಭೆ ಇಂಜಿನಿಯರ್‌ ಕೆ.ಆರ್.ಕವಿತಾ

ಹಾಸನ: ಮೇಲ್ಸೇತುವೆ ನಿರ್ಮಾಣ ಹಿನ್ನೆಲೆಯಲ್ಲಿ ನಗರದ ಕೆಎಸ್‌ಆರ್‌ಟಿಸಿ
ಹೊಸ ಬಸ್ ನಿಲ್ದಾಣದ ಎದುರು ಕಳೆದ ನಾಲ್ಕು ವರ್ಷಗಳಿಂದ ಉರಿಯದೇ ಇದ್ದ ಬೀದಿ ದೀಪಗಳಿಗೆ ನಗರಸಭೆ ಇಂಜಿನಿಯರ್ ಕವಿತಾ ಕೆ.ಆರ್. ಮತ್ತೆ ಬೆಳಗುವಂತೆ ಮಾಡಿದ್ದಾರೆ.
ಸುಮಾರು ಐದು ಕಂಬಗಳಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿರಲಿಲ್ಲ. ಇದರಿಂದ ರಾತ್ರಿ ವೇಳೆ ಓಡಾಡುವವರಿಗೆ ಅನೇಕ ರೀತಿಯಲ್ಲಿ ತೊಂದರೆ ಆಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದಲೂ ದೂರು ಕೇಳಿ ಬಂದಿತ್ತು. ಹೇಳಿ ಕೇಳಿ ಅನೇಕ ಸಂದರ್ಭಗಳಲ್ಲಿ ಇಲ್ಲಿ ಜನಸಂದಣಿ ಇರುವುದರಿಂದ ರಾತ್ರಿ ವೇಳೆ ದೀಪಗಳು ಬೆಳಗಬೇಕು ಎಂಬುದನ್ನು ಅರಿತ ಕವಿತಾ ಅವರು, ಸ್ಥಳ ಪರಿಶೀಲನೆ ನಡೆಸಿ ದುರಸ್ತಿಗೆ ಕ್ರಮ ಕೈಗೊಂಡರು.
ಓವರ್ ಲೈನ್ ಮೂಲಕ ದುರಸ್ತಿ ಕಾರ್ಯ ಕೈಗೊಂಡ ಕೆಲಸ ಇಂದು ಮುಗಿಯಲಿದ್ದು, ಕತ್ತಲಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಅನುಭವಿಸುತ್ತಿರುವ ವಾಹನ ಸವಾರರು, ದಾರಿಹೋಕರಿಗೆ ಅನುಕೂಲವಾಗಲಿದೆ ಎಂದು ಕವಿತಾ ಅವರು ತಿಳಿಸಿದರು.

ನಗರದ ಹೃದಯಭಾಗದಲ್ಲಿರುವ ಹೊಸ ಬಸ್ ನಿಲ್ದಾಣದ ಬಳಿಯ ವಿದ್ಯುತ್ ದೀಪಗಳು ಬೆಳಗಳು ಆರಂಭವಾಗಿರುವುದು ಅನೇಕರಲ್ಲಿ ಖುಷಿ ತರಿಸಿದೆ.
ಸಾರ್ವಜನಿಕ ದೂರುಗಳನ್ನು ಆಧರಿಸಿ ಕವಿತಾ ಅವರು ಶೀಘ್ರ ಸ್ಪಂದಿಸಿ ಬೀದಿ ದೀಪಗಳನ್ನು ಸರಿಪಡಿಸಿದ್ದಾರೆ.
ಕವಿತಾ ಅವರಿಗೆ ನಗರಸಭೆ ಮಾಜಿ ಅಧ್ಯಕ್ಷ ಆರ್.ಮೋಹನ್ ಕೂಡ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಮೋಹನ್, ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭವಾದ ದಿನದಿಂದಲೂ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಬಲ್ಪ್ಗಳು ಬೆಳಗುತ್ತಿರಲಿಲ್ಲ. ಇದನ್ನು ಇಂಜಿನಿಯರ್ ಕವಿತಾ ಅವರ ಗಮನಕ್ಕೆ ತಂದಾಗ ಉರಿಯದೇ ಇದ್ದ ದೀಪಗಳನ್ನು ಸರಿ ಪಡಿಸಿದ್ದಾರೆ ಎಂದರು.
ಈ ಪ್ರದೇಶದಲ್ಲಿ ವಿದ್ಯುತ್ ಬಲ್ಬ್ಗಳು ಇಲ್ಲದ ಕಾರಣ ಈ ಹಿಂದೆ ಅನೇಕ ಕಳ್ಳತನ ಪ್ರಕರಣ ನಡೆದಿವೆ. ಜೊತೆಗೆ ಬಸ್ ನಿಲ್ದಾಣಕ್ಕೆ ಬರುವ ಮಹಿಳೆಯರು, ಮಕ್ಕಳು ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ನಮ್ಮ ಮನವಿಗೆ ಸ್ಪಂದಿಸಿ ಬೀದಿ ದೀಪಗಳನ್ನು ಸರಿಪಡಿಸಿದ ಇಂಜಿನಿಯರ್ ಕವಿತಾ ಅವರಿಗೆ ತಮ್ಮ ವಾರ್ಡ್ನ ಎಲ್ಲರ ಪರವಾಗಿ ಧನ್ಯವಾದ ಹೇಳಿದರು

ಈಗಾಗಲೇ ರೈಲ್ವೆ ಮೇಲ್ಸೇತುವೆಯ ಒಂದು ಭಾಗ ವಾಹನ ಸಂಚಾರಕ್ಕೆ ಸಿದ್ಧವಾಗಿದ್ದು, ಅಲ್ಲೂ ಕೂಡ ಅಳವಡಿಸಿರುವ ಬೀದಿ ದೀಪಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮೋಹನ್ ಮನವಿ ಮಾಡಿದರು.