ಹಾಸನ: ತೀವ್ರ ಜಿದ್ದಾಜಿದ್ದಿ ಹಾಗೂ ಪೈಪೋಟಿಯಿಂದಾಗಿ ಕುತೂಹಲದ ಕಣವಾಗಿದ್ದ ಹಾಸನ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಇಂದು ತೆರೆ ಬಿದ್ದಿದ್ದು, ನೂತನ ಅಧ್ಯಕ್ಷರಾಗಿ ಬಿ.ಪಿ.ಕೃಷ್ಣೇಗೌಡ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಖಜಾಂಚಿಯಾಗಿ ಇವರದೇ ತಂಡದ ಕೆ.ಆರ್.ಹೇಮಂತ್ ಆಯ್ಕೆಯಾಗಿದ್ದರೆ, ರಾಜ್ಯ ಪರಿಷತ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಎಂ.ಎಲ್.ಮಂಜುನಾಥ್ ಅವರಿಗೆ ಸೋಲಾಗಿದ್ದು, ಕೆ.ಎಂ.ಶ್ರೀನಿವಾಸ್ ಬಣದ ರಾಜು.ಟಿ ಅವರು ಕೇವಲ ಒಂದು ಮತಗಳ ಅಂತರದಿಂದ ಗೆಲುವಿನ ನಗೆ ಬೀಗಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಯಿಂದ ನಗರದ ಆರ್.ಸಿ.ರಸ್ತೆಯಲ್ಲಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಚುನಾವಣೆ ನಡೆಯಿತು. ಮಧ್ಯಾಹ್ನದ ವೇಳೆಗೆ ಎಲ್ಲಾ 74 ಮಂದಿ ನಿರ್ದೇಶಕರು ಮತ ಚಲಾವಣೆ ಮಾಡಿದ್ದರಿಂದ ವೋಟಿಂಗ್ ಮುಕ್ತಾಯಗೊಂಡಿತು.
ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮಧ್ಯಾಹ್ನ ನಂತರ ಮತ ಎಣ ಕೆ ಆರಂಭವಾಯಿತು. 74 ಮತಗಳ ಪೈಕಿ ಬಿ.ಪಿ.ಕೃಷ್ಣೇಗೌಡ ಅವರು 42 ಮತ ಪಡೆದ ಜಯಭೇರಿ ಬಾರಿಸಿದರೆ, ಪ್ರತಿಸ್ಪರ್ಧಿ ಕೆ.ಎಂ.ಶ್ರೀನಿವಾಸ್ 31 ಮತ ಪಡೆಯುವ ಮೂಲಕ ಸೋಲು ಅನುಭವಿಸಿದರು.
ಜಿಲ್ಲಾ ಖಜಾಂಚಿಯಾಗಿ ಕೆ.ಆರ್.ಹೇಮಂತ್ ಅವರು 43 ಮತ ಪಡೆದು ಗೆಲುವು ಸಾಧಿಸಿದ್ದರೆ, ಪ್ರತಿಸ್ಪರ್ಧಿ ಎಸ್.ಮಧು 31 ಮತ ಪಡೆದು ಪರಾಭವಗೊಂಡರು.
ಇನ್ನು ರಾಜ್ಯ ಪರಿಷತ್ ಸದಸ್ಯರಾಗಿ ಟಿ.ರಾಜು 37 ಮತ ಪಡೆದು ಗೆಲುವನ್ನು ತಮ್ಮದಾಗಿಸಿಕೊಂಡರೆ. ಇವರ ವಿರುದ್ಧ ಕಣಕ್ಕಿಳಿದಿದ್ದ ಎಂ.ಎಲ್.ಮAಜುನಾಥ್ 36 ಮತ ಪಡೆದುಕೊಂಡರೂ ಕೇವಲ ಒಂದು ಮತದಿಂದ ಸೋಲು ಅನುಭವಿಸಬೇಕಾಯಿತು. ಒಟ್ಟು 74 ಮತಗಳಲ್ಲಿ 1 ಮತ ತಿರಸ್ಕೃತಗೊಂಡಿದೆ.
ಅಂತಿಮವಾಗಿ ಸರ್ಕಾರಿ ನೌಕರರ ಸಂಘದ ನುತನ ಜಿಲ್ಲಾಧ್ಯಕ್ಷರಾಗಿ ಬಿ.ಪಿ.ಕೃಷ್ಣೇಗೌಡ, ಖಜಾಂಚಿಯಾಗಿ ಕೆ.ಆರ್.ಹೇಮಂತ್ ಮತ್ತು ರಾಜ್ಯ ಪರಿಷತ್ ಸದಸ್ಯರಾಗಿ ರಾಜು ಟಿ. ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಎ.ಗೋವಿಂದರಾಜು ಘೋಷಿಸಿದರು.
ವಿಜಯೋತ್ಸವ: ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ನೂತನ ಅಧ್ಯಕ್ಷರಾದ ಕೃಷ್ಣೇಗೌಡರು ಮತ್ತವರ ಟೀಂ ವಿಜಯೋತ್ಸವ ಆಚರಿಸಿದರು. ಈ ವೇಳೆ ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಮೊದಲಾದವರು ನೂತನ ಪದಾಧಿಕಾರಿಗಳು ಅಭಿನಂದಿಸಿದರು. ಈ ವೇಳೆ ಕೃಷ್ಣೇಗೌಡ ಅವರ ಸಹೋದರ ಬಾಗೂರು ಮಂಜೇಗೌಡ, ಬೂವನಹಳ್ಳಿ ಸ್ವಾಮಿಗೌಡ, ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ, ಮಾಜಿ ಅಧ್ಯಕ್ಷ ಕೃಷ್ಣೇಗೌಡ ಮೊದಲಾದವರಿದ್ದರು.