ನಾಳೆ ಹಾಸನಕ್ಕೆ ಸಿಎಂ ಆಗಮನ: ಎತ್ತಿನಹೊಳೆ ಕೇವಲ ಕಾಂಗ್ರೆಸ್ ಯೋಜನೆ ಅಲ್ಲ ಎಂದು ಜೆಡಿಎಸ್ ಗರಂ!

ಹಾಸನ: ನಾಳೆ ಲೋಕಾರ್ಪಣೆಗೊಳ್ಳುತ್ತಿರುವ ಎತ್ತಿನಹೊಳೆ ಯೋಜನೆ ಮೊದಲ ಹಂತದ ಶ್ರೇಯಸ್ಸು ಕೇವಲ ಕಾಂಗ್ರೆಸ್‌ಗೆ ಮಾತ್ರವಲ್ಲ, ಬಿಜೆಪಿ-ಜೆಡಿಎಸ್‌ಗೂ ಸಲ್ಲಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಹೇಳಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆ ಸಂತೋಷ, ಆದರೆ ಇಡೀ ಕ್ರೆಡಿಟ್ ನಮಗೇ ಸಲ್ಲಬೇಕು ಎಂದು ಕಾಂಗ್ರೆಸ್‌ನವರು ಹೇಳುತ್ತಿರುವುದಕ್ಕೆ ನಮ್ಮ ವಿರೋಧವಿದೆ.

೨೦೧೪ ರಲ್ಲಿ ಯೋಜನೆಗೆ ಅವರೇ ಶಂಕುಸ್ಥಾಪನೆ ಮಾಡಿದರು. ನಂತರ ಮೈತ್ರಿ ಸರ್ಕಾರಗಳಲ್ಲಿ ಭಾಗಿಯಾಗಿದ್ದ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳೂ ಯೋಜನೆ ಸಾಕಾರಕ್ಕೆ ಕೊಡುಗೆ ನೀಡಿವೆ ಎಂದು ಹೇಳಿದರು. ಮೈತ್ರಿ ಸರ್ಕಾರ, ಬಿಜೆಪಿ ಅವಧಿಯಲ್ಲೂ ವಿವಿಧ ಕಾಮಗಾರಿ ಆಗಿದೆ.

ಎಲ್ಲಾ ಪಕ್ಷಗಳು ಕಾಣಿಕೆ ನೀಡಿವೆ ಎಂದರು.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಪ್ರಥಮ ಹಂತದ ಕಾಮಗಾರಿ ಬಹುತೇಕ ಮುಗಿದಿತ್ತು. ಇದರ ಕ್ರೆಡಿಟ್ ಮಾಜಿ ಸಿಎಂಗಳಾದ ಹೆಚ್.ಡಿ.ಕುಮಾರಸ್ವಾಮಿ,ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೂ ಸಲ್ಲಬೇಕು ಎಂದು ವಾದಿಸಿದರು.

ಮಾಜಿ ಸಚಿವ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ಎತ್ತಿನಹೊಳೆ ಮೊದಲ ಹಂತದ ಯೋಜನೆ ಉದ್ಘಾಟನೆಗೆ ಇಡೀ ಸರ್ಕಾರ ಬರುತ್ತಿದೆ. ಆಹ್ವಾನ ಪತ್ರಿಕೆಯಲ್ಲಿ ೩೩ ಜನ ಮಂತ್ರಿಗಳ ಹೆಸರಿದೆ. ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಸಕಲೇಶಪುರ ಭಾಗದಲ್ಲಿ ೪೪೪ ಎಕರೆಯನ್ನು ಯೋಜನೆಗೆ ನೀಡಲಾಗಿದೆ. ಸಕಲೇಶಪುರ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಜನರ ತ್ಯಾಗದಿಂದಲೇ ಯೋಜನೆ ಸಾಕಾರ ಆಗಿದೆ. ಅವರನ್ನೂ ಗೌರವಿಸುವ ಕೆಲಸ ಮಾಡಿ. ಮಲೆನಾಡು ಭಾಗದಲ್ಲಿ ಆಗಿರುವ ಅತಿವೃಷ್ಟಿ ಹಾನಿಗೆ ಪರಿಹಾರ ಕೊಡಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ದ್ಯಾವೇಗೌಡ, ಮಂಜೇಗೌಡ, ರಘು ಹೊಂಗೆರೆ, ಸಿದ್ದೇಶ್ ಇದ್ದರು