ಹಾಸನ: ಗಂಡ-ಹೆಂಡತಿ ಜಗಳ ಬಿಡಿಸಿದವನನ್ನು ಕೊಂದವನಿಗೆ ಆರು ವರ್ಷ ಜೈಲು

ಹಾಸನ: ಕಬ್ಬು ಲೋಡ್ ಕೂಲಿ ಹಣದ ಮುಂಗಡ ಕೊಡಲಿಲ್ಲ ಎಂದು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದ ಅಪರಾಧಿಗೆ 6 ವರ್ಷ ಕಾರಾಗೃಹ ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ದಾದಾಸಾಬ್ ಶಿಕ್ಷೆಗೆ ಒಳಗಾದ ಅಪರಾಧಿ. 2021ರ ಜ. 22 ರಂದು ಸಯ್ಯದ್ ಜಬೀವುಲ್ಲಾ ಅವರು ಕಬ್ಬು ತುಂಬಿಸು ಕೆಲಸಕ್ಕೆ ಮುಂಗಡ ನೀಡಲಿಲ್ಲ ಎಂದು ಅವರ ಜೊತೆ ಜಗಳ ಮಾಡಿದ್ದ ದಾದಾಸಾಬ್ ಮಾರಣಾಂತಿಕ ಹಲ್ಲೆ ನಡೆಸಿದ್ದ.

ಕಬ್ಬು ಲೋಡ್ ಮಾಡುವ ಕಾಯಕ ಮಾಡಿಕೊಂಡಿದ್ದ ದಾದಾಸಾಬ್, ಜಬೀವುಲ್ಲಾ ಹಣ ನೀಡದಿದ್ದಾಗ ದುಡ್ಡು ಕೊಡುವಂತೆ ತನ್ನ ಹೆಂಡತಿ ಜೊತೆ ಜಗಳ ಮಾಡುತ್ತಿದ್ದ. ಆಗ ಅಲ್ಲಿಗೆ ಬಂದ ಸಯ್ಯದ್ ಜಬೀವುಲ್ಲಾ ದಂಪತಿಯ ಜಗಳ ಬಿಡಿಸಿ ತೆರಳಿದ್ದ.

 ಶೆಡ್ ಮುಂದೆ ಬೆಂಕಿ ಕಾಯಿಸುತ್ತಿದ್ದ ಕುಳಿತಿದ್ದ ಆತನ ಹಿಂಬಾಲಿಸಿಕೊಂಡು ಬಂದ ದಾದಾಸಾಬ್ ಮುಂಗಡ ಹಣ ಕೊಡದೆ ಜಗಳ ಬಿಡಿಸಲು ಬರುತ್ತೀಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ  ದೊಣ್ಣೆಯಿಂದ ಹೊಡೆದು ಗಂಭೀರ ಗಾಯಗೊಳಿಸಿದ್ದ.

ಗಾಯಾಳುವಿಗೆ ಹಾಸನ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಅರೇಹಳ್ಳಿ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎ. ಹಿದಾಯತ್ ಉಲ್ಲಾ ಷರೀಫ್ ಅವರು ಅಪರಾಧಿ ದಾದಾ ಸಾಬ್ ಗೆ 6 ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ರೂ. ದಂಡ, ಸಂತ್ರಸ್ತೆಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಮೇ 21 ರಂದು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್. ನಾಗೇಂದ್ರ ವಾದ ಮಂಡಿಸಿದರು.