ರೈತನ ಆತ್ಮಹತ್ಯೆಗೂ ಭೂ ಪರಿಹಾರ ವಿತರಣೆಗೂ ಸಂಬಂಧವಿಲ್ಲ, ಯಾರೂ ಲಂಚ ಕೇಳಿದ ದೂರು ಬಂದಿಲ್ಲ; ವಿಶೇಷ ಭೂ ಸ್ವಾಧೀನಾಧಿಕಾರಿ ಮಾರುತಿ

ಹಾಸನ; ಬೇಲೂರು ತಾಲ್ಲೂಕು ಮಾದೀಹಳ್ಳಿ ಹೋಬಳಿ ವಡ್ಡರಹಳ್ಳಿ ಗ್ರಾಮದಲ್ಲಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈತನ ಸಾವಿಗೆ ಭೂ ಪರಿಹಾರ ವಿತರಣೆಗೂ ಸಂಬಂಧವಿಲ್ಲ. ಶಿವಪುರ ಕಾವಲು ಅರಣ್ಯ ಭೂಮಿಯಾಗಿರುವುದರಿಂದ ಗ್ರಾಮದ ಯಾವುದೇ ಸಂತ್ರಸ್ತರಿಗೂ ಪರಿಹಾರ ವಿತರಣೆ ಆಗಿಲ್ಲ ಎಂದು ಎತ್ತಿನಹೊಳೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ಮಾರುತಿ ಸ್ಪಷ್ಟಪಡಿಸಿದ್ದಾರೆ.

ಐದಳ್ಳ ಕಾವಲು ಹಾಗೂ ಶಿವಪುರ ಕಾವಲು ಗ್ರಾಮಗಳು ಅರಣ್ಯ ಭೂಮಿ ಎಂದು ನೋಟಿಫಿಕೇಷನ್ ಆಗಿದೆ. ಸರ್ಕಾರದಿಂದ ಅಲ್ಲಿ ನಾಲೆಗೆ ಬಳಕೆಯಾಗಿರುವ ಭೂಮಿಗೆ ಪ್ರತಿಯಾಗಿ ಅರಣ್ಯ ಇಲಾಖೆಗೆ ಬದಲಿ ಭೂಮಿ ನೀಡಲಾಗಿದೆ.

ಆದರೂ ಅರಣ್ಯ ಭೂಮಿಯಲ್ಲಿ ಮಂಜೂರಾತಿ ಪಡೆದಿರುವ ಅಥವಾ ಉಳುಮೆ ಮಾಡುತ್ತಿರುವ ರೈತರಿಗೆ ಅನ್ಯಾಯವಾಗಬಾರದು ಎಂದು ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ ಸರ್ಕಾರಕ್ಕೆ ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮೃತಪಟ್ಟಿರುವ ರೈತ ಪರಿಹಾರ ಕೋರಿ ಅರ್ಜಿಯನ್ನೂ ಸಲ್ಲಿಸಿಲ್ಲ. ಇಡೀ ಶಿವಪುರ‌ ಹಾಗೂ ಐದಳ್ಳ ಕಾವಲ್ ನ ಯಾವುದೇ ರೈತರಿಗೂ ಪರಿಹಾರ ವಿತರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.