ಹಾಸನ ಜಿಲ್ಲೆಯಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ, ಒಡಲು ಭರ್ತಿಯತ್ತ ಹೇಮಾವತಿ ಡ್ಯಾಂ, ಭೂಕುಸಿತ, ಕಾಡಾನೆ ಹಾವಳಿ, ವಿಪಕ್ಷ ನಾಯಕ ಅಶೋಕ್ ಭೇಟಿ ಇಂದು

ಹಾಸನ, ಮೇ 27, 2025: ಹಾಸನ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮಲೆನಾಡು ಭಾಗದ ಸಕಲೇಶಪುರ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿದ್ದು, ಮನೆಗಳಿಗೆ ಹಾನಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ರಸ್ತೆಯ ಆನೆಮಹಲ್, ದೊಡ್ಡತಪ್ಪಲು ಪ್ರದೇಶಗಳಲ್ಲಿ ಮಳೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಲು ವಿಪಕ್ಷ ನಾಯಕ ಆರ್. ಅಶೋಕ್ ಇಂದು ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಲಿದ್ದಾರೆ. ಹೇಮಾವತಿ ಜಲಾಶಯಕ್ಕೆ ಒಳಹರಿವಿನಲ್ಲಿ ಏರಿಕೆ

ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಭಾರೀ ಮಳೆಯಿಂದ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಒಂದೇ ದಿನದಲ್ಲಿ 8,004 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದ್ದು, ಒಟ್ಟು 17,812 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2,922 ಅಡಿಯಾಗಿದ್ದರೆ, ಇಂದಿನ ನೀರಿನ ಮಟ್ಟ 2,901.80 ಅಡಿ. ಸದ್ಯ ಜಲಾಶಯದಲ್ಲಿ 20.881 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಟ್ಟು ಸಾಮರ್ಥ್ಯ 37.103 ಟಿಎಂಸಿ. ಹೊರಹರಿವು 3,225 ಕ್ಯೂಸೆಕ್ ಆಗಿದೆ.

ಮಳೆಯಿಂದ ಜನಜೀವನಕ್ಕೆ ತೊಂದರೆ:
ಭಾರೀ ಮಳೆಯಿಂದ ವಾಹನ ಸವಾರರು, ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಬೀದಿ ಬದಿ ವ್ಯಾಪಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಮನೆಯಿಂದ ಹೊರಬರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ಮಳೆಯ ನಡುವೆಯೂ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸದಿರುವುದರಿಂದ ವಿದ್ಯಾರ್ಥಿಗಳು ಮಳೆಯಲ್ಲಿಯೇ ತರಗತಿಗೆ ತೆರಳುವಂತಾಗಿದೆ.

ಕಾಡಾನೆ ಹಾವಳಿ: ರೈತನೊಬ್ಬ ಕೂದಲೆಳೆ ಅಂತರದಲ್ಲಿ ಪಾರು:
ಮಳೆಯ ನಡುವೆಯೂ ಬೇಲೂರು ತಾಲ್ಲೂಕಿನ ಕೋಗೋಡು ಗ್ರಾಮದಲ್ಲಿ ಕಾಡಾನೆಯೊಂದು ಕಾಫಿ ತೋಟದಲ್ಲಿ ದಾಳಿ ಮಾಡಿದ ಘಟನೆ ನಡೆದಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬ ಮರವೇರಿ ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿದ್ದಾನೆ. ಕಾಡಾನೆಯ ದಾಳಿಯಿಂದ ಕಾಫಿ, ಅಡಿಕೆ ಗಿಡಗಳು ಧ್ವಂಸವಾಗಿದ್ದು, ಅಪಾರ ಬೆಳೆ ನಾಶವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಭೇಟಿ ನೀಡಿ, ಕಾಡಾನೆಯ ಚಲನವಲನದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.