ಕುರಿಗಾಹಿಗಳಿಗೆ ಬಂದೂಕು ಪರವಾನಗಿ‌ ಕೊಡಿ, ಸ್ಕೂಲ್ ಡ್ರಾಪೌಟ್, ಬಾಲ ವಿವಾಹ ತಡೆಯಿರಿ, ಡಿಸಿಗಳು ಡೈರಿ ಬರೆಯಿರಿ: ಜಿಲ್ಲಾಧಿಕಾರಿ, ಜಿಪಂ ಸಿಇಒಗಳ ಸಭೆಯಲ್ಲಿ ಸಿಎಂ ಕಟ್ಟುನಿಟ್ಟಿನ ಸೂಚನೆ

ಸರ್ಕಾರ ಮೊಟ್ಟೆ, ಹಾಲು, ರಾಗಿಮಾಲ್ಟ್‌ ಒದಗಿಸುತ್ತಿದ್ದರೂ ದಾಖಲಾತಿ ಏಕೆ ಕಡಿಮೆಯಾಗುತ್ತಿದೆ?" ಎಂದು ಪ್ರಶ್ನಿಸಿದ ಸಿಎಂ, ಡಿಡಿಪಿಐ ಮತ್ತು ಬಿಇಒಗಳು ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದರು.

ಬೆಂಗಳೂರು, ಮೇ 31, 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಜಿಲ್ಲಾಧಿಕಾರಿಗಳು (ಡಿಸಿ) ಮತ್ತು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (ಸಿಇಒ) ಜೊತೆಗಿನ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಶಿಕ್ಷಣ, ಆರೋಗ್ಯ, ಭೂ ಸ್ವಾಧೀನ, ಅಪೌಷ್ಠಿಕತೆ, ಬಾಲ್ಯ ವಿವಾಹ, ಮತ್ತು ಇತರೆ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದ ಸಿಎಂ, ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಿಕ್ಷಣ ಕ್ಷೇತ್ರಕ್ಕೆ ಒತ್ತು
ಸಭೆಯ ಆರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರಗತಿಯನ್ನು ಪರಿಶೀಲಿಸಿದ ಸಿಎಂ, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೆಲವು ಜಿಲ್ಲೆಗಳ ಕಳಪೆ ಸಾಧನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಶಿಕ್ಷಕರ ಕೊರತೆ, ಸಿಬ್ಬಂದಿ ಕೊರತೆ ಎಂಬ ನೆಪ ಸಾಕು. ದಕ್ಷಿಣ ಕನ್ನಡದಂತಹ ಜಿಲ್ಲೆಗಳು ಉತ್ತಮ ಫಲಿತಾಂಶ ತಂದಿವೆ. ಡಿಡಿಪಿಐಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಕರ ಕಾರ್ಯಕ್ಷಮತೆಯನ್ನು ಪರಿಶೀಲಿಸಬೇಕು,” ಎಂದು ಸೂಚಿಸಿದರು.

ಶೇ.60ಕ್ಕಿಂತ ಕಡಿಮೆ ಫಲಿತಾಂಶ ತಂದ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್ ಜಾರಿಗೊಳಿಸಿ, ಸಮರ್ಪಕ ಉತ್ತರ ಬಾರದಿದ್ದರೆ ಕ್ರಮಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ಸೂಚಿಸಿದರು.

ವಿವೇಕ ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಹಣ ಬಿಡುಗಡೆಯಾದರೂ ಕಾಮಗಾರಿ ವಿಳಂಬ ತಡೆಗೆ  ಶಿಕ್ಷಣ ಇಲಾಖೆಯನ್ನು ತಾಕೀತು ಮಾಡಿದ ಸಿಎಂ, “ಕಾಮಗಾರಿಗಳಲ್ಲಿ ವಿಳಂಬವಾಗದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ,” ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಡ್ರಾಪ್‌ಔಟ್ ತಡೆಯಲು ಪೋಷಕರ ಜೊತೆ ಸಂವಾದ ನಡೆಸುವಂತೆ ತಿಳಿಸಿದರು. “ಸರ್ಕಾರ ಮೊಟ್ಟೆ, ಹಾಲು, ರಾಗಿಮಾಲ್ಟ್‌ ಒದಗಿಸುತ್ತಿದ್ದರೂ ದಾಖಲಾತಿ ಏಕೆ ಕಡಿಮೆಯಾಗುತ್ತಿದೆ?” ಎಂದು ಪ್ರಶ್ನಿಸಿದ ಅವರು, ಡಿಡಿಪಿಐ ಮತ್ತು ಬಿಇಒಗಳು ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದರು.

ಬಾಲ್ಯ ವಿವಾಹ ಮತ್ತು ಬಾಲಗರ್ಭಿಣಿ ಪ್ರಕರಣ ತಡೆಗೆ ಕ್ರಿಮಿನಲ್ ಕೇಸ್
ಬಾಲ್ಯ ವಿವಾಹ ಮತ್ತು ಬಾಲಗರ್ಭಿಣಿ ಪ್ರಕರಣಗಳನ್ನು ತಡೆಯಲು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು. “ಹಿಂದುಳಿದ, ದಲಿತ, ಅಶಿಕ್ಷಿತ ಕುಟುಂಬಗಳಲ್ಲಿ ಈ ಸಮಸ್ಯೆ ಹೆಚ್ಚು. ಸರಿಯಾಗಿ ನಿಗಾ ಇಡದ ಪಿಡಿಒ ಮತ್ತು ಕಂದಾಯ ಸಿಬ್ಬಂದಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ,” ಎಂದು ತಾಕೀತು ಮಾಡಿದರು.

ಅಪೌಷ್ಠಿಕತೆ ನಿಯಂತ್ರಣಕ್ಕೆ ಕ್ರಮ
ತೀವ್ರ ಅಪೌಷ್ಠಿಕ ಮಕ್ಕಳ ಸಂಖ್ಯೆಯನ್ನು ಪ್ರತಿ ವರ್ಷ ಶೇ.1ರಷ್ಟು ಕಡಿಮೆಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದರು. “ಬೀದರ್, ವಿಜಯನಗರ, ಬಳ್ಳಾರಿಯಂತಹ ಜಿಲ್ಲೆಗಳಲ್ಲಿ ಆರೋಗ್ಯ ತಪಾಸಣೆ ನಿರಂತರವಾಗಿ ನಡೆಸಿ, ವೈಜ್ಞಾನಿಕ ವರದಿ ಸಿದ್ಧಪಡಿಸಿ,” ಎಂದರು. ಮಕ್ಕಳ ಹಿಮೋಗ್ಲೋಬಿನ್‌ ಮಟ್ಟ ಮತ್ತು ಆರೋಗ್ಯ ತಪಾಸಣೆಗೆ ಒತ್ತು ನೀಡಿ ಎಂದರು.

ಭೂ ಸ್ವಾಧೀನದಲ್ಲಿ ತಾಂತ್ರಿಕ ಸಮಸ್ಯೆ
ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಭೂ ಸ್ವಾಧೀನದ ತಾಂತ್ರಿಕ ತೊಂದರೆಗಳ ಬಗ್ಗೆ ಕಿಡಿಕಾರಿದ ಸಿಎಂ, “ಎಷ್ಟು ವರ್ಷಗಳಿಂದ ಇದೇ ಕತೆ? ಅಗತ್ಯವಿದ್ದರೆ ವಿಶೇಷ ಅಧಿಕಾರಿಯನ್ನು ನೇಮಿಸಿ,” ಎಂದರು. ಸಚಿವ ಸತೀಶ್ ಜಾರಕಿಹೊಳಿ, 42 ಬಾಕಿ ಯೋಜನೆಗಳಲ್ಲಿ 22 ಪೂರ್ಣಗೊಂಡಿವೆ ಎಂದು ತಿಳಿಸಿದರು. ಎಸ್‌ಎಲ್‌ಎಒಗಳನ್ನು ಜಿಲ್ಲಾಧಿಕಾರಿಗಳ ಅಧೀನಕ್ಕೆ ತರುವಂತೆ ಸಿಎಂ ಸೂಚಿಸಿದರು.

ಅನರ್ಹ ಪಡಿತರ ಚೀಟಿಗಳ ರದ್ದತಿ

ಅನರ್ಹ ಪಡಿತರ ಚೀಟಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸಿಎಂ ಕಳವಳ ವ್ಯಕ್ತಪಡಿಸಿದರು. “ಯಾವ ಜಿಲ್ಲೆಯಲ್ಲೂ ಶೇ.60ಕ್ಕಿಂತ ಹೆಚ್ಚು ಅರ್ಹರು ಇರಲು ಸಾಧ್ಯವಿಲ್ಲ. ನಕಲಿ ಮತ್ತು ಅನರ್ಹ ಕಾರ್ಡ್‌ಗಳನ್ನು ರದ್ದುಗೊಳಿಸಿ, ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ,” ಎಂದರು.

ಯುವನಿಧಿ ಮತ್ತು ಕುರಿಗಾಹಿಗಳ ರಕ್ಷಣೆ
ಯುವನಿಧಿ ಫಲಾನುಭವಿಗಳಿಗೆ ಮಾರುಕಟ್ಟೆ ಬೇಡಿಕೆಗೆ ತಕ್ಕ ತರಬೇತಿ ಮತ್ತು ಉದ್ಯೋಗ ಒದಗಿಸಲು ಸಿಎಂ  ನಿರ್ದೇಶನ ನೀಡಿದರು. ಕುರಿಗಾಹಿಗಳಿಗೆ ಬಂದೂಕು ಪರವಾನಗಿ ನೀಡುವ ಕಾರ್ಯವನ್ನು ಸಮರ್ಪಕಗೊಳಿಸಲು ಮತ್ತು ಅರಣ್ಯ ಇಲಾಖೆಯ ಕಿರುಕುಳವನ್ನು ತಡೆಯಲು ಸೂಚಿಸಿದರು. “ಕುರಿಗಾಹಿಗಳ ಮೇಲೆ ಅವೈಜ್ಞಾನಿಕ ಕೇಸು ದಾಖಲಾತಿಯನ್ನು ನಿಲ್ಲಿಸಿ,” ಎಂದರು.

ಡೈರಿ ಬರೆಯಲು ಆದೇಶ
ಜಿಲ್ಲಾಧಿಕಾರಿಗಳು ನಿಯಮಿತವಾಗಿ ಡೈರಿ ಬರೆಯಬೇಕು ಎಂದು ಸಿಎಂ ಸೂಚಿಸಿದರು. “ಡೈರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ತಲುಪಬೇಕು. ಫೀಲ್ಡ್‌ ಅನುಭವಗಳನ್ನು ದಾಖಲಿಸಿ, ಜಿಲ್ಲೆಗಳಲ್ಲಿ ನಿಮ್ಮ ಕೆಲಸದ ಗುರುತು ಉಳಿಸಿ,” ಎಂದು ಹುರಿದುಂಬಿಸಿದರು.