ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ, ಈಗ ಬದಲಾವಣೆ ಪ್ರಶ್ನೆ ಬಂದಿಲ್ಲ; ಜಿ.ಪರಮೇಶ್ವರ್

ಹಾಸನ: ಪರಮೇಶ್ವರ್ ಸಿಎಂ ಆಗಲಿ ಎಂಬ ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ ಹೇಳಿಕೆಗ ಹಾಸನದಲ್ಲಿ ಪ್ರತಿಕ್ರಿಯಿಸಿದ ಗೃಹಸಚಿವ ಜಿ.ಪರಮೇಶ್ವರ್,ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಈಗ ಸಿಎಂ ಬದಲಾವಣೆ ಬಗ್ಗೆ ಊಹೆಗಳೆಲ್ಲ ಬೇಡ ಎಂದರು.

ಕಾಗೇರಿ ಅವರು ಹೇಳಿದ್ದಾರೆ ಎಂದರೆ ನನ್ನ ಡಿಮ್ಯಾಂಡ್ ಎಲ್ಲಿ ಬಂತು? ಇವತ್ತು ಸಿದ್ದರಾಮಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿ. ಅವರು ಸಮರ್ಪಕವಾಗಿ ರಾಜ್ಯವನ್ನು ನಡೆಸುತ್ತಿದ್ದಾರೆ, ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ.ಅವರನ್ನು ಬದಲಾವಣೆ ಮಾಡುವ ಪ್ರಶ್ನೆ ಇದೆಯಾ? ಎಂದು ಪ್ರಶ್ನಿಸಿದರು.

ಕಾಗೇರಿ ಸಾಹೇಬ್ರು ಯಾಕೆ ಹೇಳಿದರು? ಅದರಲ್ಲಿ ಏನು ಅರ್ಥ ಇದೆ ಅಂತ ಅವರನ್ನೇ ಕೇಳಿ. ನಾವು ಪ್ರಣಾಳಿಕೆಯಲ್ಲಿ ಹೇಳಿದ ಕಾರ್ಯಕ್ರಮಗಳನ್ನು ಸಿಎಂ ಅನುಷ್ಠಾನ ಮಾಡುತ್ತಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ನಿಮಗೆ? ಈಗ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಬರ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಊಹೆಗಳೆಲ್ಲಾ ಬೇಡ, ಈಗ ಮುಖ್ಯಮಂತ್ರಿ ಇದ್ದಾರೆ. ಈಗ ನೀವು ಏಕೆ ಡಿಸ್ಟಾರ್ಬ್ ಮಾಡುತ್ತೀರಿ? ಎಂದ ಅವರು ಜಾತಿವಾರು ಡಿಸಿಎಂ ರೇಸ್‌ನಲ್ಲಿ ತಮ್ಮ ಹೆಸರು ಪ್ರಸ್ತಾಪವಾದ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಹೆಸರು ಇದೆ ಅಂತ ಯಾರು ಹೇಳಿದರು? ಇನ್ನೂ ಸ್ವಲ ದಿನಗಳ ಕಾಲ ಚರ್ಚೆ ನಡೆಯಲಿ ಎಂದರು.

ಚನ್ನಪಟ್ಟಣದಿಂದ ಡಿ.ಕೆ.ಶಿವಕುಮಾರ್ ಸ್ಪರ್ಧೆ ವಿಚಾರ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದರು.