ಸರ್ಕಾರಿ ಹಾಸ್ಟೆಲ್ ನಲ್ಲಿ ಅಪ್ರಾಪ್ತ ‘ಅಮಲುದಾರರು’; ಹಾಸ್ಟೆಲ್ ನಲ್ಲೇ ಸಿಕ್ತಿದೆ ಗಾಂಜಾ, ವೈಟ್ನರ್!?

ಕಲಿಕೆಯ ವಯಸ್ಸಿನಲ್ಲಿ ಎತ್ತ ಸಾಗುತ್ತಿದ್ದಾರೆ ವಿದ್ಯಾರ್ಥಿಗಳು?

ಹಾಸನ: ಬೇಲೂರು ತಾಲೂಕು ಬಿಕ್ಕೋಡಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳು ಮಾದಕ ವ್ಯಸನಿಗಳಾಗಿರುವ ಆರೋಪ ಕೇಳಿ ಬಂದಿದ್ದು, ಅಪ್ರಾಪ್ತ ಮಕ್ಕಳು ಗಂಜಾ ಬೀಡಿ, ಸಿಗರೇಟು, ಅಮುಲುಕಾರಕ ವೈಟ್ನರ್ ಸೇವಿಸುವ ಆತಂಕಕಾರಿ ವಿಡಿಯೋ ವೈರಲ್ ಆಗಿದೆ.

ಹಾಸ್ಟೆಲ್‌ಗೆ ಮಾದಕ ವಸ್ತುಗಳನ್ನು ತರುತ್ತಿರುವ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ತಮ್ಮ ತಮ್ಮಲ್ಲೇ ನಾನು ಮೊದಲು ನಾನು ಮೊದಲು ಎಂದು ಮಾದಕ ಪದಾರ್ಥ ಸೇವಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಅಶ್ಲೀಲವಾಗಿ ಮಾತನಾಡುತ್ತಾ ಗಾಂಜಾ, ವೈಟ್ನರ್ ಸೇವಿಸುತ್ತಾ ಅಮಲಿನಲ್ಲಿ ತೇಲುತ್ತಿರುವ ಅಪ್ತಾಪ್ತರು ತಾವೇ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಈ ಹಿಂದೆಯೂ ಈ ವಿಷಯ ಬಹಿರಂಗವಾಗಿತ್ತು. ವಿಷಯ ಗಮನಕ್ಕೆ ಬಂದಾಗ ಮಾದಕ ವಸ್ತು ವ್ಯಸನಿಯೊಬ್ಬ ಹಾಸ್ಟೆಲ್ ವಾರ್ಡನ್ ಮೇಲೇ ಹಲ್ಲೆಗೆ ಮುಂದಾಗಿದ್ದ ಘಟನೆಯೂ ನಡೆದಿತ್ತು.

ಘಟನೆ ಬಗ್ಗೆ ಸಾರ್ವಜನಿಕರು ಆತಂಕ ಹೊರಹಾಕಿದ್ದು ತಕ್ಷಣವೇ ಮಾದಕ ವಸ್ತುಗಳ ವ್ಯಸನಿಯಾಗಿರುವ ಅಪ್ರಾಪ್ತರನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ಅವರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.