ಹಾಸನ:ಶಿವಪುರ ಕಾವಲಿನ ಜೈನರಗುತ್ತಿಯಲ್ಲಿನ 31 ಅಡಿ ಎತ್ತರದ ಮುನಿಸುವ್ರತ ತೀರ್ಥಂಕರ ಹಾಗೂ 24 ಅಡಿ ಎತ್ತರದ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಶೀತಲನಾಥ ತೀರ್ಥಂಕರ ಮೂರ್ತಿಗಳಿಗೆ ಭಾನುವಾರ ಚಿಕ್ಕಮಗಳೂರು ಜೈನ ಸಮಾಜದಿಂದ ಮಹಾಮಸ್ತಕಾಭಿಷೇಕ ನೆರವೇರಿತು.
ದಿಗಂಬರ ಜೈನಮುನಿ ವೀರಸಾಗರ ಮುನಿಮಹಾರಾಜರ ಸಾನಿಧ್ಯದಲ್ಲಿ ನಡೆದ ವೈಭವದ ಮಸ್ತಕಾಭಿಷೇಕವನ್ನು ಚಿಕ್ಕಮಗಳೂರು ಜೈನ ಸಮಾಜದವರು ಮಾತ್ರವಲ್ಲದೆ, ವಿವಿಧ ಊರಿನಿಂದ ಆಗಮಿಸಿದ ಜಿನ ಭಕ್ತರು ಕಣ್ತುಂಬಿಕೊಂಡರು.
ಶ್ವೇತಧಾರಿಗಳಾಗಿದ್ದ ಜೈನ ಶ್ರಾವಕರು ಎರಡೂ ಮೂರ್ತಿಗಳಿಗೆ ಶ್ರದ್ದಾಭಕ್ತಿಯಿಂದ ಮಸ್ತಕಾಭಿಷೇಕ ನೆರವೇರಿಸಿದರು. ಜೈನ ಮುನಿಗಳು ಹಾಗೂ ಪುರೋಹಿತರ ಮಂತ್ರಘೋಷ ಮುಗಿಲು ಮುಟ್ಟುವಂತೆ ಕೇಳಿ ಬರುತ್ತಿತ್ತು. ಮಸ್ತಕಾಭಿಷೇಕ ವಿಕ್ಷಿಸುತ್ತಿದ್ದ ಜೈನ ಶ್ರಾವಕಿಯರು ಸುಶ್ರಾವ್ಯವಾಗಿ ಜಿನ ಗಾಯನ ಹಾಡುತ್ತ ಭಕ್ತಿ ಸಮರ್ಪಿಸಿದರು.
ಮೂರ್ತಿಗಳಿಗೆ ಜಲ, ಎಳನೀರು, ಹಾಲು, ಕಷಾಯ, ಚತುಷ್ಕೋನ ಕಳಸ, ಶ್ರೀಗಂಧ ಅಭಿಷೇಕ ನೆರವೇರಿಸಲಾಯಿತು. ಬಣ್ಣದ ಹೂವುಗಳಿಂದ ಮೂರ್ತಿಗಳಿಗೆ ಪುಷ್ಪವೃಷ್ಟಿ ನೆರವೇರಿಸಲಾಯಿತು. ಮೂರ್ತಿಗಳಿಗೆ ಶ್ರಾವಕಿರು ಜಿನ ಗಾಯನ ಹಾಡುತ್ತ ಮಂಗಳಾರತಿ ನೆರವೇರಿಸಿದರು.
ಧಾರ್ಮಿಕ ಸಭೆಯಲ್ಲಿ ವೀರಸಾಗರ ಮುನಿ ಮಹಾರಾಜ್ ಮಾತನಾಡಿ, ಲೋಕಕಲ್ಯಾರ್ಥ ಹಾಗೂ ಪ್ರತಿ ಜೀವಿಗೂ ಒಳಿತಾಗಲಿ ಎಂದು ತೀರ್ಥಂಕರ ಮೂರ್ತಿಗೆ ಮಸ್ತಕಾಭಿಷೇಕ ನೆರವೇರಿಸಲಾಗುವುದು.
ಶಿಥಲನಾಥ ಹಾಗೂ ಮುನಿಸುವ್ರತ ತೀರ್ಥಂಕರ ಮೂರ್ತಿ ಪ್ರತಿಷ್ಟಾಪನೆ ಅಂಗವಾಗಿ ನವೆಂಬರ್ 29 ರಿಂದ ಡಿಸೆಂಬರ್ 4 ರವರೆಗೆ ಜೈನರಗುತ್ತಿಯಲ್ಲಿ ಪಂಚಕಲ್ಯಾಣಕ ಮಹೋತ್ಸವ ನಡೆಲಾಗಿದೆ. ಜನವರಿ 26 ರಂದು ಜೈನರಗುತ್ತಿ ಕ್ಷೇತ್ರದಲ್ಲಿ ಮಂಡಲ ಪೂಜೆ ನೆರವೇರಲಿದೆ. ಪಂಚಕಲ್ಯಾಂಕ ಮಹೋತ್ಸವ ಸಂತನ್ನಗೊಂಡ ದಿನದಿಂದ 48 ದಿನದವರೆಗೂ ತೀರ್ಥಂಕರ ಮೂರ್ತಿಗಳಿಗೆ ಮಸ್ತಕಾಭಿಷೇಕ ನೆರವೇರಿಸಲಾಗುತ್ತಿದೆ ಎಂದು ಹೇಳಿದರು.
ಪುರೋಹಿತ ರತ್ನ ಶಿತಲ ಪಂಡಿತ್ ಪೂಜಾಕಾರ್ಯ ನೆರವೇರಿಸಿದರು. ಚಿಕ್ಕಮಗಳೂರು ಜೈನ ಸಮಾಜ ಮುಖಂಡರಾದ ಜಿನೇಂದ್ರ ಬಾಬು, ಎ.ಬಿ.ಮಹಾವೀರ, ಶಾಂತರಾಜು, ಶಿತಲ್, ಕೆ.ಬಿ.ಸಂತೋಷ್, ಬ್ರಹ್ಮಸೂರಯ್ಯ, ವಿರೇಂದ್ರ, ಎಚ್.ಎಸ್.ಸಂತೋಷ್, ಚಾರಿತ್ರ ಜಿನೇಂದ್ರ, ನಾಗರತ್ನಮ್ಮ ಸುರೇಂದ್ರ, ನಿಶ್ಚಲ ಸನತ್ಕುಮಾರ್, ನಾಗಶ್ರೀ ವಿರೇಂದ್ರ, ಸುಮಿತ್ರ ಬ್ರಹ್ಮಸೂರಯ್ಯ, ಜಯಶ್ರೀ ಧರಣೇಂದ್ರ, ದೇವೇಂದ್ರ ಹೊಂಗೇರಿ, ಎಚ್.ಎಸ್.ಅನಿಲ್ ಕುಮಾರ್, ಜಿನಚಂದ್ರ, ಅಡಗೂರಿನ ಧವನ್ ಜೈನ್, ಆದಿರಾಜಯ್ಯ, ರವಿಕುಮಾರ್, ರಾಜು ಭಾಗವಹಿಸಿದ್ದರು.