ಮೊನ್ನೆ ರಕ್ತಸಿಕ್ತ ಕಾರು, ಇಂದು ಕೊಡಗಿನ ವ್ಯಕ್ತಿಯ ಶವ ಪತ್ತೆ: ಏನಾಗಿದೆ ಸಕಲೇಶಪುರ ತಾಲೂಕಿನ ಕಾಡಂಚಿನ ಹಳ್ಳಿಯಲ್ಲಿ?

ಸಕಲೇಶಪುರ, ಮೇ 14, 2025: ತಾಲೂಕಿನ ಯಸಳೂರು ಹೋಬಳಿಯ ಮಾಗೇರಿ ಸಮೀಪದ ಕಲ್ಲಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಶನಿವಾರ ಒಳಭಾಗ ರಕ್ತಸಿಕ್ತವಾಗಿದ್ದ ಸ್ಥಿತಿಯಲ್ಲಿ ದೊರಕಿದ್ದ ಕಾರಿನಲ್ಲಿ ಬಂದಿದ್ದ ವ್ಯಕ್ತಿಯನ್ನೇ ಹತ್ಯೆ ಮಾಡಿ ದುಷ್ಕರ್ಮಿಗಳು ಶವವನ್ನು ಎಸೆದು ಹೋಗಿರುವುದು ಖಚಿತವಾಗಿದೆ.

ಸೋಮವಾರಪೇಟೆ ತಾಲೂಕಿನ ಕಕ್ಕೆಹೊಳೆ ಜಂಗ್ಸನ್‌ನ ನಿವಾಸಿ ಸಂಪತ್ (ಶಂಭು)ಮೃತ ವ್ಯಕ್ತಿ.

ಶನಿವಾರ ಬೆಳಗ್ಗೆ ಗ್ರಾಮದ ಜನವಸತಿ ಪ್ರದೇಶದಲ್ಲಿ ಕಾರೊಂದು ಸಂದೇಹಾಸ್ಪದವಾಗಿ ನಿಂತಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು. ಸಮೀಪದ ತೋಟದ ಕೆಲಸಕ್ಕೆ ಕಾರ್ಮಿಕರನ್ನು ಕರೆತಂದ ಚಾಲಕನೊಬ್ಬ, ಕಾರಿನಲ್ಲಿ ರಕ್ತದ ಕಲೆಗಳಿರುವ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದ.

ತಕ್ಷಣವೇ ಯಸಳೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡ, ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ತೆರಳಿ ವಿವರವಾದ ಪರಿಶೀಲನೆ ನಡೆಸಿ, ಮಹಜರ್ ನಡೆಸಿತ್ತು.

ಪ್ರಾಥಮಿಕ ತನಿಖೆಯಿಂದ ಕಾರು ಕುಶಾಲನಗರದ ವ್ಯಾಪಾರಿ ಜಾನ್ ಅವರಿಗೆ ಸೇರಿದ್ದು ಎಂದು ತಿಳಿದುಬಂದಿತ್ತು. ಈ ಕಾರನ್ನು ಸೋಮವಾರಪೇಟೆ ತಾಲೂಕಿನ ಕಕ್ಕೆ ಹೊಳೆ ಜಂಗ್ಸನ್‌ನ ನಿವಾಸಿ ಸಂಪತ್ (ಶಂಭು) ಶನಿವಾರ ತೆಗೆದುಕೊಂಡು ಹೋಗಿದ್ದರು ಎಂಬ ಮಾಹಿತಿ ಲಭಿಸಿತ್ತು.

ಆದರೆ, ಸಂಪತ್‌ರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಪೊಲೀಸರು ಸಂಪತ್‌ ಅವರ ಕೊನೆಯ ಕರೆಗಳ ವಿವರಗಳನ್ನು ಸಂಗ್ರಹಿಸಿದ್ದು, ಅವರ ಹಿಂದಿನ ಗಲಾಟೆಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದ್ದರು. ಆದರೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.

ಇಂದು ಯಸಳೂರು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯರನ್ನು ಒಳಗೊಂಡ ತಂಡದೊಂದಿಗೆ ತೀವ್ರ ಹುಡುಕಾಟದ ಕಾರ್ಯಾಚರಣೆಯ ಬಳಿಕ ಶವ ಪತ್ತೆಯಾಗಿದೆ. ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮಾಗೇರಿ ಗ್ರಾಮವು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಗದ್ದೆ-ತೋಟಗಳ ನಡುವೆ ಮನೆಗಳಿವೆ. ಪ್ರವಾಸಿ ತಾಣಗಳು ಮತ್ತು ಹೋಮ್‌ಸ್ಟೇಗಳಿಂದಾಗಿ ಅಪರಿಚಿತರ ಓಡಾಟ ಹೆಚ್ಚಾಗಿದ್ದು, ಇಂತಹ ಘಟನೆಗಳು ಸಾಮಾನ್ಯವಾಗುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.