ಕೆರೆಯಲ್ಲಿ ಮುಳುಗಿ ಮೃತಪಟ್ಟ ನಾಲ್ವರು ಬಾಲಕರ ಶವ ಹೊರತೆಗೆದ ಅಗ್ನಿಶಾಮಕ ದಳ

ಹಾಸನ : ಕೆರೆಯಲ್ಲಿ ಮುಳುಗಿ ಮೃತಪಟ್ಟ ನಾಲ್ಕು ಮಕ್ಕಳ ಮೃತದೇಹಗಳನ್ನು ಅಗ್ನಿಶಾಮಕದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ.

ಕೆರೆಯ ಬಳಿ ಜಮಾಯಿಸಿರುವ ನೂರಾರು ಮಂದಿ, ನೀರಿನಿಂದ ಹೊರತೆಗೆದ ಮಕ್ಕಳ ಶವಗಳನ್ನು ಕಂಡು ಕಣ್ಣೀರು ಹಾಕಿದರು.

ಆಲೂರು ಠಾಣೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಲೂರು ಆಸ್ಪತ್ರೆಗೆ ರವಾನಿಸಿದರು.

ಏನಾಗಿತ್ತು ಘಟನೆ?;

ಕೆರೆಯಲ್ಲಿ ಈಜಲು ಹೋಗಿದ್ದ ಐವರ ಪೈಕಿ ನಾಲ್ವರು ಬಾಲಕರು ನೀರು ಪಾಲಾದ ಘಟನೆ ಆಲೂರು ತಾಲ್ಲೂಕಿನ ಕದಾಳು ಸಮೀಪದ ಮುತ್ತಿಗೆಯಲ್ಲಿ ನಡೆದಿದೆ.

ಮುತ್ತಿಗೆ ಜೀವನ್(13), ಸಾತ್ವಿಕ್(11), ವಿಶ್ವ ಹಾಗೂ ಪೃಥ್ವಿ (12) ಮೃತ ಬಾಲಕರು. ಚಿರಾಗ್ (10) ಬದುಕುಳಿದಿದ್ದು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲೆಗೆ ರಜೆ ಇರುವುದರಿಂದ ಈಜಲು ಹೋಗಿದ್ದ ಮಕ್ಕಳು ಒಬ್ಬರನ್ನೊಬ್ಬರು ರಕ್ಷಿಸುವ ಯತ್ನದಲ್ಲಿ ಮುಳುಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಶವಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಆಗಮಿಸಿ ಶವ ಹುಡುಕಾಟ ಕಾರ್ಯವನ್ನು ಚುರುಕಾಗಿ ನಡೆಸಲು ಸೂಚಿಸಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.