ಹಾಸನ, ಏಪ್ರಿಲ್ 13: “ಸಮಾಜವನ್ನು ಒಡೆಯುತ್ತಿದ್ದೇವೆ ಎಂಬ ಬಿಜೆಪಿಯ ಆರೋಪ ಸತ್ಯಕ್ಕೆ ದೂರವಾದದ್ದು. ಹಿಂದೂ ಸಮಾಜದ ಮತಗಳಿಗಾಗಿ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ” ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶವನ್ನು ಉಲ್ಲೇಖಿಸಿ, “ಅಂಬೇಡ್ಕರ್ ಸಾಯುವಾಗ, ‘ನಾನು ಹಿಂದೂವಾಗಿ ಸಾಯಲ್ಲ’ ಎಂದು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಏಕೆಂದರೆ, ಹಿಂದೂ ಧರ್ಮದ ಹೆಸರಿನಲ್ಲಿ ನಡೆಯುವ ಮೂಢನಂಬಿಕೆಗಳು, ದಬ್ಬಾಳಿಕೆಗಳು, ಅಸ್ಪೃಶ್ಯರ ಮೇಲಿನ ದೌರ್ಜನ್ಯಗಳಿಂದ ಬೇಸತ್ತಿದ್ದರು. ಆ ರೀತಿಯ ಹಿಂದೂ ಧರ್ಮ ನಮಗೆ ಬೇಕೇ?” ಎಂದು ಪ್ರಶ್ನಿಸಿದರು.
“ನಾವೆಲ್ಲರೂ ಹಿಂದೂಗಳೇ. ಆದರೆ, ನಮ್ಮದು ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸಾಮರಸ್ಯದ ಹಿಂದೂತ್ವ. ಬಿಜೆಪಿಯವರು ಗೋಡ್ಸೆಯವರ ತತ್ವವನ್ನು ಮುಂದಿಟ್ಟುಕೊಂಡು ಮಾತನಾಡುತ್ತಾರೆ. ನಾವು ಗೋಡ್ಸೆಯವರ ಹಿಂದೂತ್ವವನ್ನು ಪಾಲಿಸುವವರಲ್ಲ, ಗಾಂಧೀಜಿಯವರ ಹಿಂದೂತ್ವವನ್ನು ಬೆಂಬಲಿಸುವವರು” ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಕ್ಕಿಂತ, ಅಸಹಾಯಕರಿಗೆ, ಧ್ವನಿರಹಿತರಿಗೆ ನ್ಯಾಯ ಒದಗಿಸುವುದೇ ತಮ್ಮ ಗುರಿ ಎಂದ ರಾಜಣ್ಣ, “ಯಾವ ಜನಾಕ್ರೋಶವಿದೆ? ಮನ್‌ಮೋಹನ್ ಸಿಂಗ್ ಅವರ ಕಾಲದಲ್ಲಿ ಒಂದು ಡಾಲರ್‌ಗೆ ರೂಪಾಯಿಯ ಮೌಲ್ಯ ಎಷ್ಟಿತ್ತು, ಇಂದು ಎಷ್ಟಿದೆ? ಡೀಸೆಲ್, ಪೆಟ್ರೋಲ್, ಗ್ಯಾಸ್, ರೈತರು ಬಳಸುವ ಗೊಬ್ಬರದ ಬೆಲೆ ಆಗ ಎಷ್ಟಿತ್ತು, ಈಗ ಎಷ್ಟಿದೆ? ಇದಕ್ಕೆ ಯಾರು ಕಾರಣ? ಕೇವಲ ದೂಷಣೆಗಾಗಿ ದೂಷಣೆ ಮಾಡಿದರೆ ಸಾಲದು, ಉತ್ತರ ಕೊಡಬೇಕು” ಎಂದು ಬಿಜೆಪಿಗೆ ತಿರುಗೇಟು ನೀಡಿದರು.
“ನಾವು ಸಮಾಜದಲ್ಲಿ ಸಾಮರಸ್ಯವನ್ನೇ ಬಯಸುತ್ತೇವೆ. ಆದರೆ, ಸತ್ಯವನ್ನು ಹೇಳಲೇಬೇಕು” ಎಂದು ಹೇಳಿದ ರಾಜಣ್ಣ, ಜನರಿಗೆ ಸತ್ಯಾಂಶ ತಿಳಿಯಲಿ ಎಂದು ಕರೆ ನೀಡಿದರು.