ಈ ಪೆನ್ ಡ್ರೈವ್ ಪ್ರಕರಣದ ಹಿಂದೆ ಬಿಜೆಪಿ ಹಾಗೂ ಬ್ರದರ್ ಸ್ವಾಮಿಯ ಬಹುದೊಡ್ಡ ಷಡ್ಯಂತ್ರ ಅಡಗಿದೆ: ಆಡಿಯೋ ಬಳಸಿ ತಿರುಗೇಟು ನೀಡಲು ಮುಂದಾದ ಕಾಂಗ್ರೆಸ್

ಎಕ್ಸ್ ನಲ್ಲಿ ಪೋಸ್ಟ್‌ ಮಾಡಿ ಬಿಜೆಪಿಯನ್ನು ತಿವಿದ ಕೆಪಿಸಿಸಿ

ಹಾಸನ: ಎಲ್.ಆರ್. ಶಿವರಾಮೇಗೌಡ ಜತೆಗಿನ ಫೋನ್ ಕಾಲ್ ಸಂಭಾಷಣೆ, ಕಾರ್ತಿಕ್ ಗೌಡ ಭೇಟಿಯ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಕೋಲಾಹಲ ಎಬ್ಬಿಸಿದ್ದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಖಾಸಗಿ ಚಾನಲ್ ಮುಖ್ಯಸ್ಥರೊಂದಿಗೆ  ನಡೆಸಿದ್ದ ಸಂಭಾಷಣೆಯ ಆಡಿಯೋ ಈಗ ಕಾಂಗ್ರೆಸ್ ಪಾಲಿಗೆ ಮಹಾಅಸ್ತ್ರವಾಗಿ ದೊರಕಿದೆ.

ಖಾಸಗಿ ಚಾನಲ್ ಮುಖ್ಯಸ್ಥರೊಂದಿಗೆ ಮಾತನಾಡಿದ್ದ ದೇವರಾಜೇಗೌಡ, ತಾನು ಈಗ ಸಂಪೂರ್ಣವಾಗಿ ಹೈಕಮಾಂಡ್ ಕಂಟ್ರೋಲ್ ನಲ್ಲಿದ್ದು‌ ಸುದ್ದಿಗೋಷ್ಠಿ ಮಾಡಿದ್ದೂ ಅವರ ಸೂಚನೆಯ ಮೇರೆಗೇ ಎಂದು ಹೇಳಿದ್ದ ಆಡಿಯೋ ಸುದ್ದಿ ವಾಹಿನಿ ಬಿತ್ತರಿಸಿದೆ.

ದೇವರಾಜೇಗೌಡ ಸುದ್ದಿಗೋಷ್ಠಿ, ಆಡಿಯೋಗಳನ್ನು ಮುಂದಿಟ್ಟುಕೊಂಡು ಪೆನ್ ಡ್ರೈವ್ ಪ್ರಕರಣವನ್ನು ಕಾಂಗ್ರೆಸ್ ಹಾಗೂ ಡಿಸಿಎಂ ಕುತಂತ್ರ ಎಂದು ಬಿಂಬಿಸುತ್ತಿದ್ದ ಬಿಜೆಪಿ ಕಾರ್ಯತಂತ್ರಕ್ಕೆ ಪ್ರತಿಯಾಗಿ ಈಗ ಕಾಂಗ್ರೆಸ್, ದೇವರಾಜೇಗೌಡ ಸಂಭಾಷಣೆ ಆಡಿಯೋ ಮುಂದಿಟ್ಟುಕೊಂಡು ತಿರುಮಂತ್ರ ಹಾಕಲು ಮುಂದಾಗಿದೆ.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮುಖಂಡ ಪವನ್ ಖೇರಾ ಎಕ್ಸ್ ನಲ್ಲಿ ಹೇಳಿಕೆ ಪೋಸ್ಟ್ ಮಾಡಿ, ಪೆನ್ ಡ್ರೈವ್ ಪ್ರಕರಣದಲ್ಲಿನ ಬಿಜೆಪಿ ಪಾತ್ರ ಬಯಲಾಗಿದೆ ಬರಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದೆಡೆ ಕೆಪಿಸಿಸಿ ಎಕ್ಸ್ ಖಾತೆಯಲ್ಲೂ ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ದೇವರಾಜೇಗೌಡ ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ಪೆನ್ ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರನ್ನು ಎಳೆದು ತಂದಾಗಲೇ ಇಲ್ಲೇನೋ ಮಸಲತ್ತಿದೆ ಎಂಬ ಗುಮಾನಿ ದಟ್ಟವಾಗಿತ್ತು.

ಆದರೆ ದೇವರಾಜೇಗೌಡನ ಮಾತುಗಳ ಸ್ಕ್ರಿಪ್ಟ್, ಡೈರೆಕ್ಷನ್ ಎಲ್ಲವೂ ಬಿಜೆಪಿ ಹೈಕಮಾಂಡಿನದ್ದು ಎಂದು ಬಹಿರಂಗವಾಗಿದೆ.

ಒಂದೇ ಏಟಿನಲ್ಲಿ ಜೆಡಿಎಸ್ ಪಕ್ಷವನ್ನು ಮುಳುಗಿಸುವುದರ ಜೊತೆಗೆ ಕಾಂಗ್ರೆಸ್ ನಾಯಕರನ್ನೂ ಟಾರ್ಗೆಟ್ ಮಾಡುವ ಮಹಾ ಕುತಂತ್ರ @amitshah ಅವರದ್ದು, ಆದರೆ ಕಾಂಗ್ರೆಸ್ ನಾಯಕರ ಕೂದಲು ಕೊಂಕಿಸಲು ಅಸಾಧ್ಯದ ಮಾತು ಎಂಬುದನ್ನು ಅರ್ಥ ಮಾಡಿಕೊಂಡರೆ ಒಳಿತು.

ಈ ಪೆನ್ ಡ್ರೈವ್ ಪ್ರಕರಣದ ಹಿಂದೆ ಬಿಜೆಪಿ ಹಾಗೂ ಬ್ರದರ್ ಸ್ವಾಮಿಯ ಬಹುದೊಡ್ಡ ಷಡ್ಯಂತ್ರ ಅಡಗಿದೆ.

@BJP4Karnataka ಎಂಬ ಅನೈತಿಕ ರಾಜಕೀಯ ಪಕ್ಷಕ್ಕೆ ಕನಿಷ್ಠ ನೈತಿಕ ಪ್ರಜ್ಞೆ ಇಲ್ಲದಿರುವುದು ರಾಜಕೀಯ ಕ್ಷೇತ್ರಕ್ಕೆ ಕಳಂಕದಂತಾಗಿದೆ ಎಂದು ಕಾಂಗ್ರೆಸ್ ಪೋಸ್ಟ್ ನಲ್ಲಿ ತಿರುಗೇಟು ನೀಡಿದೆ.