ಮಳೆ ಆರ್ಭಟಕ್ಕೆ ಕುಸಿದ ಡಾಂಬರ್ ರಸ್ತೆ, ಗುಂಡಿಯಲ್ಲಿ ಸಿಲುಕಿದ ಕೆ.ಎಸ್.ಆರ್.ಟಿ.ಸಿ. ಬಸ್

ಹಾಸನ, ಮೇ 25: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಕಲೇಶಪುರ ತಾಲ್ಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ಭಾನುವಾರ ಭಾರೀ ಮಳೆಯಿಂದಾಗಿ ಡಾಂಬರ್ ರಸ್ತೆ ದಿಢೀರ್ ಕುಸಿದು, ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಚಕ್ರ ರಸ್ತೆಯ ದೊಡ್ಡ ಗುಂಡಿಯಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.

ಮಳೆಯ ರಭಸಕ್ಕೆ ಕುಸಿದ ರಸ್ತೆಯಲ್ಲಿ ಬಸ್ ಸಿಲುಕಿರುವುದರಿಂದ ಪ್ರಯಾಣಿಕರು ವಾಹನದಿಂದ ಕೆಳಗಿಳಿದು ಮಳೆಯಲ್ಲಿಯೇ ನಿಂತು ಬಸ್ ಮೇಲೆತ್ತಲು ಪರದಾಡಿದರೂ ಅದು ಸಾಧ್ಯವಾಗಲಿಲ್ಲ. ಸಾರಿಗೆ ಸಂಪರ್ಕ ಕಡಿತಗೊಂಡು ಸ್ಥಳೀಯ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ-ನಿರ್ವಾಹಕ ಸ್ಥಳೀಯ ಟ್ರ್ಯಾಕ್ಟರ್ ಸಹಾಯ ಪಡೆದು ಗುಂಡಿಯಲ್ಲಿ ಸಿಲುಕಿರುವ ಬಸ್‌ನ್ನು ತೆರವುಗೊಳಿಸಲು ಶ್ರಮಿಸುತ್ತಿದ್ದಾರೆ. ಭಾರೀ ಮಳೆಯಿಂದಾಗಿ ರಸ್ತೆ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದ್ದು, ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಮಲೆನಾಡು ಭಾಗದಲ್ಲಿ ಮುಂದುವರಿದಿರುವ ಭಾರೀ ಮಳೆಯಿಂದ ಜನಜೀವನ ತೀವ್ರವಾಗಿ ತೊಂದರೆಗೊಳಗಾಗಿದ್ದು, ಜಿಲ್ಲಾಡಳಿತವು ಸಾರ್ವಜನಿಕರಿಗೆ ಅಗತ್ಯ ಸಹಾಯವಾಣಿಗಳನ್ನು ಒದಗಿಸಿದೆ.