ಸಕಲೇಶಪುರ ಬೈಪಾಸ್ ರಸ್ತೆಯಲ್ಲಿ ಬ್ರೇಕ್ ಫೇಲ್ ಆಗಿ ಖಾಸಗಿ ಬಸ್ ಅಪಘಾತ!

ಹಾಸನ: ಸಕಲೇಶಪುರ ಪಟ್ಟಣದ  ಬೈಪಾಸ್ ರಸ್ತೆಯ ಮಳಲಿ ಬಳಿ ಖಾಸಗಿ ಬಸ್ ಬ್ರೇಕ್ ಫೇಲ್ ಆಗಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ  ಬೆಳಗಿನ ಜಾವ ಸಂಭವಿಸಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್, ರಾಷ್ಟ್ರೀಯ ಹೆದ್ದಾರಿ 75 ರ ಮಳಲಿ ಬೈಪಾಸ್ ಬಳಿ ಬ್ರೇಕ್ ಫೇಲ್ ಆಗಿದ್ದು, ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಬಸ್‌ನಲ್ಲಿ ಇದ್ದ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಿಂದ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.