ಅಡುಗೆ ಮಾಡಿರಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಂದಿದ್ದ ಹಂತಕನಿಗೆ ಜೀವಾವಧಿ ಶಿಕ್ಷೆ

ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು

ಹಾಸನ: ಅಡುಗೆ ಮಾಡಿರಲಿಲ್ಲ ಎಂಬ ಕಾರಣಕ್ಕೆ ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಕೊಲೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಸಕಲೇಶಪುರ ತಾಲ್ಲೂಕು ಅಗಲಹಟ್ಟಿ ಗ್ರಾಮದ ಚಂದ್ರಶೇಖರ್ ಶಿಕ್ಷೆಗೆ ಒಳಗಾದ ಅಪರಾಧಿ.

2021ರ ಜ. 11ರಂದು ರಾತ್ರಿ 9ರ ಸಮಯದಲ್ಲಿ ಮನೆಗೆ ಬಂದಿದ್ದ ಚಂದ್ರಶೇಖರ್ ಅಡುಗೆ ಮಾಡಿಲ್ಲವೆಂದು ಪತ್ನಿಯೊಂದಿಗೆ ಜಗಳ ತೆಗೆದಿದ್ದಲ್ಲದೆ ದೊಣ್ಣೆಯಿಂದ ಮನಬಂದಂತೆ ಹೊಡೆದು ಆಕೆಯನ್ನು ಕೊಂದಿದ್ದ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

 ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎ.ಹಿದಾಯತ್ ಉಲ್ಲಾ ಷರೀಫ್ ಅವರು ಸಾಕ್ಷ್ಯಾಧಾರಗಳ್ನು ಪರಿಗಣಿಸಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 1೦ ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಕೆ.ಎಸ್.ನಾಗೇಂದ್ರ ವಾದ ಮಂಡಿಸಿದ್ದರು.