ಡೈಮಂಡ್ ಪಿ ಯು ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

ಹಾಸನ: ಕನ್ನಡ ಸಾಹಿತ್ಯ ಪರಿಷತ್ತಿನ 11೦ನೇ ಸಂಸ್ಥಾಪನಾ ದಿನಾಚರಣೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಡೈಮಂಡ್ ಪಿಯು ಕಾಲೇಜು ಹಾಗೂ ಸ್ಫೂರ್ತಿ ಫೌಂಡೇಶನ್ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಚರಿಸಲಾಯಿತು‌.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಮಾತನಾಡಿ, ವಿವಿಧ ಪ್ರಾಂತ್ಯಗಳ ಆಳ್ವಿಕೆಗೆ ಒಳಪಟ್ಟಿದ್ದ ಕನ್ನಡಿಗರಿಗೆ ಒಂದು ವೇದಿಕೆ ಸೃಷ್ಟಿಸುವ ಹಿನ್ನಲೆಯಲ್ಲಿ ಸರ್.ಎಂ.ವಿಯವರ ಆಲೋಚನೆಯ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಉಗಮವಾಯಿತು ಎಂದರು.

ಮೈಸೂರು ರಾಜ ಮನೆತನ ಇಡೀ ವಿಶ್ವಕ್ಕೆ ಮಾದರಿಯಾಗಬಲ್ಲ ಆಡಳಿತವನ್ನು ನೀಡಿದವರು,ಒಡೆಯರ ಬದ್ಧತೆಯಿಂದ,ಮಿರ್ಜಾ ಇಸ್ಮಾಯಿಲ್ ಹೊಣೆಗಾರಿಕೆ ಫಲವಾಗಿ ಪರಿಷತ್ತು ರೂಪುಗೊಂಡಿತು ಎಂದರು.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನ ಹಾಸನ ಶಾಖಾ ವ್ಯವಸ್ಥಾಪಕ ದಯಾನಂದ್ ಮಾತನಾಡಿ, ಹೆಚ್ಚೆಚ್ಚು ಭಾಷೆ ಬೆಳೆಸಿದರೆ ಮಾತ್ರ ಭಾಷೆ ಉಳಿಯಲು,ಉಳಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬೂವನಹಳ್ಳಿ ಬೊಮ್ಮೇಗೌಡ ಮಾತನಾಡಿ,ಶತಮಾನಗಳ ಇತಿಹಾಸವಿರುವ ಕಸಾಪ ಈ ಹಿಂದಿನಿಂದಲೂ ನಾಡು,ನುಡಿ ಹಾಗೂ ಭಾಷೆಯ ವಿಷಯವಾಗಿ ಸಾಕಷ್ಟು ಶ್ರಮಿಸಿದೆ ಎಂದರು.

ಡೈಮಂಡ್ ಪಿಯು ಕಾಲೇಜಿನ ಕಾರ್ಯದರ್ಶಿ ಹೇಮಂತ್ ಕುಮಾರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಮುಖ್ಯವಾದರೂ ಅದರೊಟ್ಟಿಗೆ ನಮ್ಮ ಮಾತೃ ಭಾಷೆಯ ಮೇಲಿನ ಅಭಿಮಾನ ಕಡಿಮೆಯಾಗದಿರಲಿ ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಶೇಖರ್,ಆರ್.ಬಿ ಶಂಕರ್, ಮಾರ್ಗದರ್ಶಿ ಸಮಿತಿ ಸದಸ್ಯ ಪ್ರಕಾಶ್ ಮೇಗಲಕೇರಿ,ಕಾಲೇಜಿನ ಪ್ರಾಂಶುಪಾಲರಾದ ಮಮತ ಹೇಮಂತ್ ಕುಮಾರ್ , ಉಪನ್ಯಾಸಕ ಲಕ್ಷ್ಮಣ್ ಇತರರು ಹಾಜರಿದ್ದರು.