ಹಾಸನ: ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಹೊತ್ತಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ನಗರದ ಸಿಇಎನ್ ಠಾಣೆಗೆ ಕರೆತಂದಿದ್ದು, ಸಂತ್ರಸ್ತನ ಮೇಲೆ ನಿನ್ನೆ ದಾಖಲಾಗಿರುವ ಪ್ರಕರಣದ ಸಂಬಂಧ ಮಾಹಿತಿ ಪಡೆಯಲಾಗುತ್ತಿದೆ. ಇಂದು ದಾಖಲಾಗಿರುವ ಪ್ರಕರಣದಲ್ಲಿ ಸೂರಜ್ ಗೆ ಬಂಧನ ಭೀತಿ ಎದುರಾಗಿದೆ.
ಹೊಳೆನರಸೀಪುರ ನಗರ ಠಾಣೆ ಪೊಲೀಸರು ಡಾ.ಸೂರಜ್ ರೇವಣ್ಣ ಅವರನ್ನು ಅವರದ್ದೇ ಕಾರಿನಲ್ಲಿ ಗನ್ನಿಕಡದ ತೋಟದ ಮನೆಯಿಂದ ಹಾಸನದ ಸಿಇಎನ್ ಠಾಣೆಗೆ ಕರೆತಂದಿದ್ದಾರೆ.
ಹಣಕ್ಕಾಗಿ ಡಾ.ಸೂರಜ್‌ರೇವಣ್ಣ ಅವರಿಗೆ ಸಂತ್ರಸ್ತ ಬ್ಲಾಕ್‌ಮೇಲ್ ಮಾಡಿರುವ ಬಗ್ಗೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ದಾಖಲಾಗಿರುವ ಎಫ್‌ಐಆರ್ ಸಂಬಂಧ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಸಂತ್ರಸ್ತ ಸೂರಜ್ ಅವರಿಗೆ ಬ್ಲಾಕ್ ಮೇಲ್ ಮಾಡಲು ಮಾಡಿದ್ದ ಎನ್ನಲಾದ ಕರೆಯ ಆಡಿಯೋ ರಿಕವರಿಗೆ ಯತ್ನ ನಡೆಯುತ್ತಿದೆ ಎನ್ನಲಾಗಿದೆ.
ದೌರ್ಜನ್ಯ ಆರೋಪ ಮಾಡಿದ್ದ ಸಂತ್ರಸ್ತ ಯುವಕ ಸೂರಜ್ ಗೆ ಕರೆ ಮಾಡಿ ಹಲವು ಬೇಡಿಕೆ ಇಟ್ಟಿದ್ದ ಬಗ್ಗೆ ದಾಖಲಾತಿಯನ್ನು ಸೂರಜ್ ಸಲ್ಲಿಸುತ್ತಿದ್ದು, ಸಂತ್ರಸ್ತ ಯುವಕ ಸೂರಜ್ ಗೆ ಕರೆ ಮತ್ತು ಮೆಸೇಜ್ ಮಾಡಿದ್ದ ಆಡಿಯೋ, ಫೋಟೋ ದಾಖಲಾತಿಗಳನ್ನ ನೀಡಿದ್ದಾರೆ ಎನ್ನಲಾಗುತ್ತಿದ್ದು ಪೊಲೀಸರು ವಿವರ ಪರಿಶೀಲಿಸುತ್ತಿದ್ದಾರೆ.
ಸೂರಜ್ ವಿರುದ್ಧವೂ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೆ ಡಾ.ಸೂರಜ್‌ರೇವಣ್ಣ ಬಂಧನ ಸಾಧ್ಯತೆಯಿದ್ದು, ವಿಚಾರಣೆ ಪೂರ್ಣಗೊಂಡ ನಂತರ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.