ಎಚ್.ಡಿ.ಕುಮಾರಸ್ವಾಮಿ ಲೋಕಸಭೆಗೆ ಸ್ಪರ್ಧಿಸಿದರೆ ಜೆಡಿಎಸ್‌ ಕಾರ್ಯಕರ್ತರಿಗೆ ಶಕ್ತಿ ತುಂಬಿದಂತಾಗುತ್ತದೆ; ಎಮ್ಮೆಲ್ಸಿ ಸೂರಜ್‌ ರೇವಣ್ಣ

ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ನಮ್ಮ ತಾತ ಡಿಕ್ಲೇರ್ ಮಾಡಿದ್ದಾರೆ. ನಮ್ಮ ಅಭ್ಯರ್ಥಿ ಬಗ್ಗೆ ಯಾವುದೇ ರೀತಿ ಸಂಶಯವಿಲ್ಲ

ಹಾಸನ: ಜೆಡಿಎಸ್ ಕಾರ್ಯಕರ್ತರಿಗೆಲ್ಲ ಸ್ಪೂರ್ತಿ, ಶಕ್ತಿಯಾಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದರೆ ಒಳ್ಳೆಯದು, ಅದರಿಂದ ಇಡೀ ರಾಜ್ಯದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ಕಾರ್ಯಕರ್ತರನ್ನು ಹುರಿದುಂಬಿಸಿದಂತಾಗುತ್ತದೆ. ಕಾರ್ಯಕರ್ತರಿಗೆ ಹೊಸ ಪರಿವರ್ತನಾ ಶಕ್ತಿ ಕೊಟ್ಟಂತೆ ಆಗುತ್ತದೆ ಎಂದರು.
ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಮಂಡ್ಯ, ಹಾಸನ ಕ್ಷೇತ್ರಗಳು ಜೆಡಿಎಸ್‌ ಗೆ ದೊರೆಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ನಮ್ಮ ತಾತ ಡಿಕ್ಲೇರ್ ಮಾಡಿದ್ದಾರೆ. ನಮ್ಮ ಅಭ್ಯರ್ಥಿ ಬಗ್ಗೆ ಯಾವುದೇ ರೀತಿ ಸಂಶಯವಿಲ್ಲ.

ನಮ್ಮ ಅಭ್ಯರ್ಥಿ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇದೆ. ನಮ್ಮ ಜಿಲ್ಲೆಯಲ್ಲಿ ಏನು ಕೆಲಸ ಮಾಡುಬೇಕೋ, ಕಾರ್ಯಕರ್ತರಿಗೆ ಶಕ್ತಿ ತುಂಬಬೇಕೋ ಅದನ್ನು ನಾನು, ರೇವಣ್ಣ ಅವರು ಮಾಡುತ್ತಿದ್ದೇವೆ. ಬೇರೆ ಜಿಲ್ಲೆ ಬಗ್ಗೆ ನನಗೆ ಮಾಹಿತಿ ಇಲ್ಲ, ನಮ್ಮ ಜಿಲ್ಲೆಯನ್ನು ನಾವು ನೋಡಬೇಕು, ಒಳ್ಳೆಯ ರೀತಿ ಚುನಾವಣೆ ಮುಗಿಸಬೇಕು. ಒಂದೊಳ್ಳೆ ಫಲಿತಾಂಶ ಕೊಡಬೇಕು, ಕಾರ್ಯಕರ್ತರ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗಬೇಕು ಅದೇ ನಮ್ಮ ಉದ್ದೇಶ ಎಂದರು.

ಲೋಕಸಭೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರದಲ್ಲಿ ನನಗೆ ಮಾಹಿತಿಯಿಲ್ಲ, ನನಗೇನೂ ಗೊತ್ತಿಲ್ಲ, ನಮ್ಮ ಜಿಲ್ಲೆ ಬಿಟ್ಟು ಹೊರಗಡೆ ಜಿಲ್ಲೆ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.