ಹಾಸನ, ಮಾರ್ಚ್ 26: ಹಾಸನ ತಾಲೂಕಿನ ಗೊರೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಹನಿಟ್ರ್ಯಾಪ್ ಪ್ರಕರಣ ಸಂಬಂಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಪಾರದರ್ಶಕತೆ ಮತ್ತು ಅಭಿವೃದ್ಧಿಯ ಉದ್ದೇಶ ಇರಬೇಕೇ ಹೊರತು, ಕೀಳುಮಟ್ಟದ ತಂತ್ರಗಳಿಗೆ ಮೊರೆ ಹೋಗಬಾರದು ಎಂದರು.
“ನಾವು ಪಾರದರ್ಶಕವಾದ ರಾಜಕಾರಣ ಮಾಡಬೇಕು. ನಮ್ಮ ಜಿಲ್ಲೆ, ತಾಲೂಕು ಮತ್ತು ರಾಜ್ಯವನ್ನು ಅಭಿವೃದ್ಧಿ ಮಾಡುವ ಉದ್ದೇಶ ನಮ್ಮದಾಗಿರಬೇಕು. ಜನ ಏಕೆ ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಆದರೆ ಇಂದು ರಾಜಕಾರಣದಲ್ಲಿ ಅವರವರ ವೈಯಕ್ತಿಕ ವಿಚಾರಗಳನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವುದು, ತಾವು ಸಿಎಂ ಆಗಲು ಇನ್ನೊಬ್ಬ ರಾಜಕಾರಣಿಗೆ ಕೆಟ್ಟ ಹೆಸರು ತರುವ ರೀತಿ ತಂತ್ರಗಾರಿಕೆ ಮಾಡುವುದು, ಪರೋಕ್ಷವಾಗಿ ಬ್ಲಾಕ್‌ಮೇಲ್ ಮೂಲಕ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ” ಎಂದರು.
ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದ ಅವರು, “ಇಂತಹ ಕೆಟ್ಟ ವ್ಯವಸ್ಥೆಯಿಂದ ಕರ್ನಾಟಕಕ್ಕೆ ದುಸ್ಥಿತಿ ಬಂದಿದೆ. ಅವರವರ ಪಕ್ಷದವರೇ ಕಿತ್ತಾಡಿಕೊಳ್ಳುತ್ತಿದ್ದಾರೆ. ರಾಜಣ್ಣ ಅವರು ಯಾವ ಸಚಿವರನ್ನು ಭೇಟಿಯಾದರು?, ಯಾವ ಹಿರಿಯ ಮುಖಂಡರನ್ನು ಭೇಟಿಯಾದರು ಎಂಬುದನ್ನು ಮಾಧ್ಯಮಗಳಲ್ಲಿ ತೋರಿಸುತ್ತಿದ್ದೀರಿ. ರಾಜಕಾರಣವನ್ನು ನೇರವಾಗಿ ಮಾಡಬೇಕು. 48 ಮಂದಿ ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನುತ್ತಾರೆ, ಇದೆಲ್ಲ ರಾಜಕೀಯದಲ್ಲಿ ಒಳ್ಳೆಯ ಸಂಪ್ರದಾಯವಲ್ಲ” ಎಂದು ಟೀಕಿಸಿದರು.
ಎಸ್ಪಿ ವಿರುದ್ಧ ಏಕವಚನದಲ್ಲಿ ಆಕ್ರೋಶ
ಪೊಲೀಸ್ ಇಲಾಖೆಯ ಕಾರ್ಯವೈಖರಿಯ ವಿರುದ್ಧವೂ ಗುಡುಗಿದ ಸೂರಜ್ ರೇವಣ್ಣ, “ನಾನೊಬ್ಬ ಎಂಎಲ್‌ಸಿ ಆಗಿದ್ದು, ಖುದ್ದಾಗಿ ಹೋಗಿ ಎಸ್‌ಪಿಗೆ ಕಂಪ್ಲೇಂಟ್ ಕೊಟ್ಟರೂ ಸ್ವೀಕರಿಸುವುದಿಲ್ಲ. ಒಂದು ದಿನವಾದರೂ ಎಫ್‌ಐಆರ್ ದಾಖಲಿಸುವುದಿಲ್ಲ. ನನಗೇ ಅನ್ಯಾಯವಾಗುತ್ತಿದೆ, ಜಿಲ್ಲೆಯ ಜನರ ಕಥೆ ಏನು? ಬೇಕೆಂದೇ ಒಂದು ದಿನ ತಡ ಮಾಡಿದರು. ಇವತ್ತು ಪೊಲೀಸ್ ಇಲಾಖೆ ಉಳಿದೇ ಇಲ್ಲ, ಸರ್ಕಾರದ ಕೈಗೊಂಬೆಯಾಗಿ ಮಾರ್ಪಟ್ಟಿದೆ” ಎಂದು ಆರೋಪಿಸಿದರು.
ಹಾಸನ ಜಿಲ್ಲೆಯ ಎಸ್‌ಪಿ ಮಹಮದ್ ಸುಜೇತಾ ಅವರ ವಿರುದ್ಧವೂ ಏಕವಚನದಲ್ಲಿ ತೀವ್ರ ವಾಗ್ದಾಳಿ ನಡೆಸಿದ ಅವರು, ಜಿಲ್ಲೆಯಲ್ಲಿ ನ್ಯಾಯ ಒದಗಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆಕ್ಷೇಪಿಸಿದರು. “ಇಂತಹ ರಾಜಕೀಯ ತಂತ್ರಗಾರಿಕೆ ಮತ್ತು ವ್ಯವಸ್ಥೆಯ ದುರುಪಯೋಗದಿಂದ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ” ಎಂದರು.