ದೇಸಿ ಬೀದಿನಾಯಿಗಳು ಈಗ ಪಾಕ್ ಗಡಿಯಲ್ಲಿ ಭಾರತೀಯ ಸೇನೆಯ ಆಪ್ತ ಸಹಾಯಕ, ಅನಾಮಿಕ ವೀರರು!

ಜಮ್ಮು: ನಾವು ಕಂತ್ರಿನಾಯಿಗಳೆಂದು ಮೂದಲಿಸುವ ದೇಸಿ ಬೀದಿ ನಾಯಿಗಳು ತಮ್ಮ ಸಹಜ ಪ್ರವೃತ್ತಿ ಮತ್ತು ನಿಷ್ಠೆಯ ಮೂಲಕ ಜಮ್ಮು ಮತ್ತು ಕಾಶ್ಮೀರದ ಭಾರತ-ಪಾಕಿಸ್ತಾನ ಗಡಿಯಲ್ಲಿ, ಭಾರತೀಯ ಸೈನಿಕರಿಗೆ ಅನಿರೀಕ್ಷಿತ ಆದರೆ ಅಮೂಲ್ಯ ಸಹಾಯಕರಾಗಿ ಹೊರಹೊಮ್ಮಿವೆ.

ಈ ಬಗ್ಗೆ ಜಮ್ಮುವಿನಿಂದ ಪ್ರಕಟವಾಗುವ ಸ್ಟೇಟ್ ಟೈಮ್ಸ್ ದೈನಿಕ ವರದಿ ಪ್ರಕಟಿಸಿದೆ. ಯಾವುದೇ ಔಪಚಾರಿಕ ತರಬೇತಿಯಿಲ್ಲದಿದ್ದರೂ, ಈ ನಾಯಿಗಳು ಭಯೋತ್ಪಾದಕರ ಒಳನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. 16ನೇ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆರ್.ಆರ್. ನಿಂಭೋರ್ಕರ್ ಅವರ ಪ್ರಕಾರ, ಭಯೋತ್ಪಾದಕರು ಗಡಿಯಾಚೆಯಿಂದ ಒಳನುಸುಳಲು ಯತ್ನಿಸಿದ ತಕ್ಷಣ, ದೇಸಿ ನಾಯಿಗಳು ಗಳ್ಳು ಹಾಕುವ ಮೂಲಕ ಹತ್ತಿರದ ಸೈನಿಕರಿಗೆ ಎಚ್ಚರಿಕೆ ನೀಡುತ್ತವೆ.

“ಅವುಗಳ ಸಕಾಲಿಕ ಎಚ್ಚರಿಕೆಗಳು ಹಲವಾರು ಒಳನುಸುಳುವಿಕೆ ಯತ್ನಗಳನ್ನು ತಡೆಗಟ್ಟಲು ಸಹಾಯ ಮಾಡಿವೆ. ಈ ನಾಯಿಗಳು ವಿಶೇಷ ತರಬೇತಿ ಪಡೆಯದಿದ್ದರೂ, ಕೆಲವು ಎಲೆಕ್ಟ್ರಾನಿಕ್ ಸಂವೇದಕಗಳಿಗಿಂತಲೂ ಗಡಿಯ ನಾಗರೋಟದಂತಹ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ,” ಎಂದು ಲೆ.ಜ. ಆರ್.ಆರ್. ನಿಂಭೋರ್ಕರ್ ಹೇಳಿದ್ದಾರೆ.

ಅವುಗಳ ಸಹಜ ಜಾಗರೂಕತೆ ಮತ್ತು ಭೂಪ್ರದೇಶದ ಪರಿಚಯವು ಸಂವೇದನಾಶೀಲ ವಲಯಗಳಲ್ಲಿ ನಿಯೋಜಿತವಾಗಿರುವ ಸೈನಿಕರಿಗೆ ವಿಶೇಷವಾಗಿ ಸಹಾಯಕವಾಗಿದೆ.

ದೇಸಿನಾಯಿಗಳ ಕೊಡುಗೆಯನ್ನು ಗುರುತಿಸಿ, ಭಾರತೀಯ ಸೇನೆಯು ಈಗ ಸಿಬ್ಬಂದಿಗೆ ಈ ನಾಯಿಗಳಿಗೆ ಆಹಾರ ನೀಡಲು ಮತ್ತು ಕಾಳಜಿ ವಹಿಸಲು ಪ್ರೋತ್ಸಾಹಿಸುತ್ತಿದೆ. ಇದರಿಂದ ಬಲವಾದ ಬಾಂಧವ್ಯವನ್ನು ಬೆಳೆಸಿ, ಪ್ರಮುಖ ಸ್ಥಳಗಳ ಸುತ್ತಲೂ ಅವುಗಳ ನಿರಂತರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳುತ್ತಿದೆ.