ಕರ್ನಾಟಕದ ತೋತಾಪುರಿ ಬೆಳೆಗಾರರಿಗೆ ಆಂಧ್ರ ನಿಷೇಧದ ಬರೆ: HAL ಸ್ಥಳಾಂತರ ವಿರೋಧ ಕಾರಣವೇ?: ನಿಷೇಧ ಹಿಂಪಡೆಯಿರಿ ಎಂದು ಪತ್ರ ಬರೆದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

ಆಂಧ್ರಪ್ರದೇಶ ಸರ್ಕಾರವು ಚಿತ್ತೂರು ಮೂಲಕ ಮಾವಿನ ಸಾಗಣೆಯನ್ನು ನಿಷೇಧಿಸಿದೆ. ಇತ್ತೀಚೆಗೆ HAL ಅನ್ನು ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಯತ್ನಗಳ ನಂತರ ಈ ಹೆಜ್ಜೆ ಇರಿಸಿದೆ. ಈ ಕ್ರಮದಿಂದ ಕರ್ನಾಟಕದ ಮಾವು ರೈತರಿಗೆ ತೊಂದರೆಯಾಗಲಿದೆ. ಬಹುಶಃ ಕರ್ನಾಟಕದಲ್ಲಿ ಮಾವು ದರ ಕುಸಿದು ಬೆಳೆಗಾರರು ನಷ್ಟ ಅನುಭವಿಸಬೇಕಾಗಬಹುದು

ಬೆಂಗಳೂರು, ಜೂನ್ 11, 2025: ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಡಳಿತವು ಇತರ ರಾಜ್ಯಗಳಿಂದ ತೋತಾಪುರಿ ಮಾವಿನ ರವಾನೆಯ ಮೇಲೆ ಜೂನ್ 7, 2025ರಂದು ವಿಧಿಸಿರುವ ನಿಷೇಧವು ಕರ್ನಾಟಕದ ಮಾವಿನ ರೈತರಿಗೆ ಆತಂಕದ ಕಾರಣವಾಗಿದೆ.

ಈ ಕುರಿತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಕೆ. ವಿಜಯಾನಂದ್ ಅವರಿಗೆ ಪತ್ರ ಬರೆದು, ಈ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.

ಚಿತ್ತೂರು ಜಿಲ್ಲಾಧಿಕಾರಿಗಳ ಆದೇಶದಂತೆ, ರಾಜಸ್ವ, ಪೊಲೀಸ್, ಅರಣ್ಯ ಮತ್ತು ಮಾರುಕಟ್ಟೆ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಂಡಗಳು ತಮಿಳನಾಡು ಮತ್ತು ಕರ್ನಾಟಕದ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜನೆಗೊಂಡಿವೆ. ಈ ಏಕಪಕ್ಷೀಯ ನಿರ್ಧಾರವು ಕರ್ನಾಟಕದ ಗಡಿ ಜಿಲ್ಲೆಗಳ ರೈತರಿಗೆ, ವಿಶೇಷವಾಗಿ ತೋತಾಪುರಿ ಮಾವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವವರಿಗೆ ತೀವ್ರ ತೊಂದರೆಯನ್ನುಂಟುಮಾಡಿದೆ. ಈ ರೈತರು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಚಿತ್ತೂರಿನ ಸಂಸ್ಕರಣ ಘಟಕಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

ಡಾ. ಶಾಲಿನಿ ರಜನೀಶ್ ಅವರು ತಮ್ಮ ಪತ್ರದಲ್ಲಿ, ಈ ನಿಷೇಧವು ರೈತರ ಜೀವನೋಪಾಯಕ್ಕೆ ಬೆದರಿಕೆಯನ್ನುಂಟುಮಾಡಿದೆ ಮತ್ತು ಕೊಯ್ಲು ನಂತರದ ಗಣನೀಯ ನಷ್ಟಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಈ ಕ್ರಮವು ಸಹಕಾರಿ ಒಕ್ಕೂಟವಾದದ ಚೈತನ್ಯವನ್ನು ದುರ್ಬಲಗೊಳಿಸುವ ಜೊತೆಗೆ, ಕರ್ನಾಟಕದಲ್ಲಿ ಆಂಧ್ರಪ್ರದೇಶದಿಂದ ತರಕಾರಿಗಳ ಒಳಹರಿವಿಗೆ ತಡೆಯೊಡ್ಡುವ ಪ್ರತೀಕಾರದ ಭಾವನೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಸರ್ಕಾರವು ಈ ವಿಷಯದಲ್ಲಿ ತಕ್ಷಣದ ಮಧ್ಯಸ್ಥಿಕೆಗಾಗಿ ಆಂಧ್ರಪ್ರದೇಶ ಸರ್ಕಾರವನ್ನು ಕೋರಿದ್ದು, ಚಿತ್ತೂರು ಜಿಲ್ಲಾಡಳಿತಕ್ಕೆ ನಿಷೇಧವನ್ನು ಹಿಂಪಡೆಯಲು ನಿರ್ದೇಶನ ನೀಡಬೇಕೆಂದು ಕೇಳಿಕೊಂಡಿದೆ. ಕೃಷಿ ವ್ಯಾಪಾರ ಮತ್ತು ಸಸ್ಯರೋಗ ಸಂಬಂಧಿತ ಕಳವಳಗಳನ್ನು ಸಮಾಲೋಚನೆಯ ಮೂಲಕ ಪರಿಹರಿಸುವುದು ಎರಡೂ ರಾಜ್ಯಗಳ ರೈತರ ಹಿತಾಸಕ್ತಿಗೆ ಸಹಕಾರಿಯಾಗಲಿದೆ ಎಂದು ಡಾ. ಶಾಲಿನಿ ಸೂಚಿಸಿದ್ದಾರೆ.

ಪ್ರಾದೇಶಿಕ ಸಾಮರಸ್ಯ ಮತ್ತು ರೈತರ ಕಲ್ಯಾಣದ ದೃಷ್ಟಿಯಿಂದ ಕೃಷಿ ಉತ್ಪನ್ನಗಳ ಮುಕ್ತ ಸಂಚಾರವನ್ನು ಪುನಃಸ್ಥಾಪಿಸಲು ಆಂಧ್ರಪ್ರದೇಶ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ಕರ್ನಾಟಕ ಸರ್ಕಾರ ವ್ಯಕ್ತಪಡಿಸಿದೆ.