ಹಾಸನ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಹಗರಣದಲ್ಲಿ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿನ ಒಬ್ಬ ಮಂತ್ರಿ ಸಹ ಭಾಗಿಯಾಗಿರುವುದರಿಂದ ತಕ್ಷಣವೇ ಅವರು ಆತ್ಮಸಾಕ್ಷಿಯಾಗಿ ರಾಜೀನಾಮೆ ನೀಡಬೇಕಿತ್ತು ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ, ಶಾಸಕ ಸಿಮೆಂಟ್ ಮಂಜು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಮೀಸಲಿಟ್ಟಿದ್ದ ದುಡ್ಡನ್ನು ಸರ್ಕಾರ ಗ್ಯಾರೆಂಟಿಗೆ ಬಳಸುತ್ತಿದೆ. ಅಧಿಕಾರಕ್ಕೆ ಬರುವ ಮುಂಚೆ ದಲಿತರ ಅಭಿವೃದ್ಧಿ ಮಾಡ್ತಿವಿ ಎಂದಿದ್ದರು. ಈಗ ಗ್ಯಾರೆಂಟಿಗಾಗಿ ದಲಿತರಿಗೆ ಮೀಸಲಿಟ್ಟ ಹಣ ಬಳಸುತ್ತಿದ್ದಾರೆ. ಇದು ಬಹಳ ನೋವಿನ ಸಂಗತಿ ಎಂದು ಕಿಡಿಕಾರಿದರು.
ದಿನನಿತ್ಯ ಬೆಲೆ ಏರಿಕೆಯಾಗುತ್ತಿದೆ. ಮುಡಾದಲ್ಲಿ ದೊಡ್ಡ ಹಗರಣ ನಡೆದಿದೆ. ಒಂದು ಕಾಲು ವರ್ಷದಲ್ಲಿ ಇಷ್ಟೆಲ್ಲಾ ಹಗರಣಗಳು ಬೆಳಕಿಗೆ ಬರ್ತಿದೆ. ಇದರಿಂದ ರಾಜ್ಯದ ಜನರಿಗೆ ಏನು ಸಂದೇಶ ಕೊಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಸಚಿವರು ಕೇವಲ ಅಧಿಕಾರಿಗಳ ಸಭೆ ನಡೆಸಿದರೆ ಸಾಲದು. ಅಧಿಕಾರಿಗಳು ಫೀಲ್ಡ್‌ಗೆ ಇಳಿದು ಕೆಲಸ ಮಾಡಬೇಕು. ಡೆಂಗ್ಯೂ ಕಡಿಮೆ ಆಗುವವರೆಗೂ ಅಧಿಕಾರಿಗಳು ಫೀಲ್ಡ್‌ಗೆ ಇಳಿದು ಕೆಲಸ ಮಾಡುವಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಆದರೆ ಅದು ಪಾಲನೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.