50 ರೂಪಾಯಿಗಾಗಿ ಗೆಳೆಯನನ್ನೇ ಕೊಂದ!; ಕುಡಿತದ ಮತ್ತು ತಂದ ಆಪತ್ತು

ಇಬ್ಬರೂ ಗೆಳೆಯರು ಎರಡು ವಾರಗಳ ಹಿಂದೆ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸಕ್ಕೆ ಸೇರಿದ್ದರು.

ಹಾಸನ: ಮದ್ಯಪಾನ ಮಾಡುವ ವೇಳೆ ಕೇವಲ ಐವತ್ತು ರೂಪಾಯಿಗಾಗಿ ಗೆಳೆಯರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಶ್ರವಣಬೆಳಗೊಳ ಹೋಬಳಿ, ಅರುವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗೆಳೆಯನ ಕೊಂದ ಆರೋಪಿ ರುದ್ರಯ್ಯ

ಬಾಗಲಕೋಟೆ ಜಿಲ್ಲೆ, ಬಾದಾಮಿ ಪಟ್ಟಣದ, ಕಳ್ಳಿಪೇಟೆ ಓಣಿ ಮೂಲದ ಅರುವನಹಳ್ಳಿ ಗ್ರಾಮದ ಕೆಪಿಐ ಇಟ್ಟಿಗೆ ಕಾರ್ಖಾನೆಯ ಕಾರ್ಮಿಕ ರಾಮಚಂದ್ರ ಸಂಜೀವಪ್ಪನವರ (42) ಕೊಲೆಯಾದ ವ್ಯಕ್ತಿ, ಆತನ‌ ಗೆಳೆಯ ರುದ್ರಯ್ಯ ಕೊಂಗವಾಡ ಕೊಲೆಗೈದ ಆರೋಪಿ.

ಮೂಲತಃ ಬಾದಾಮಿಯವರಾದ ಇಬ್ಬರೂ ಗೆಳೆಯರು ಎರಡು ವಾರಗಳ ಹಿಂದೆ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸಕ್ಕೆ ಸೇರಿದ್ದರು.

ಬುಧವಾರ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ರುದ್ರಯ್ಯ, ರಾಮಚಂದ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ತೀವ್ರವಾಗಿ ಗಾಯಗೊಂಡಿದ್ದ ಆರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ‌ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಘಟನೆ ನಂತರ ಆರೋಪಿ ಪರಾರಿಯಾಗಿದ್ದಾನೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.