ಹಾಸನ: ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಜಿಲ್ಲೆ ಹಾಗೂ ಹೊರ ಜಿಲ್ಲೆಯ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುವ ಎಸ್‌ಎಸ್‌ಎಂ ಆಸ್ಪತ್ರೆ ಇದೀಗ ರೋಗಿಗಳು ಹಾಗೂ ವೈದ್ಯರಿಗೆ ಅನುಕೂಲವಾಗುವ ಅತ್ಯಾಧುನಿಕ ವೈರ್‌ಲೆಸ್ ಬಯೋ ಸೆನ್ಸರ್ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ.
ಇಂದು ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಪತ್ರೆ ಮುಖ್ಯಸ್ಥರು ಹಾಗೂ ಹಿಮ್ಸ್ ನಿರ್ದೇಶಕ ಡಾ.ಸಂತೋಷ್ ಎಸ್.ಬಿ. ಹಾಗೂ ಹಿರಿಯ ವೈದ್ಯರಾದಮಕ್ಕಳ ತಜ್ಞ ಡಾ.ಸುಧೀರ್ ಬೆಂಗಳೂರು, ಡಾ.ಸೋಮನಾಥ್ ಮೊದಲಾದವರು ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಆಸ್ಪತ್ರೆ ಸಿಇಒ ಡಾ.ವಿನಾಯಕ್ ನಾರಾಯಣ್, ೨೨ ವರ್ಷದಿಂದ ಜನರಿಗೆ ಕೈಗೆಟಕುವ ದರದಲ್ಲಿ ನಮ್ಮ ಆಸ್ಪತ್ರೆ ಚಿಕಿತ್ಸೆ ನೀಡುತ್ತಿದೆ. ಆಗಲೇ ದಿ.ಡಾ.ದಿನೇಶ್ ಅವರು,ಸಿಟಿ ಸ್ಕ್ಯಾನ್, ನ್ಯೂರಾಲಜಿ, ರೇಡಿಯಾಲಜಿ ಮೊದಲಾದ ಸೌಲಭ್ಯಗಳನ್ನು ಹಾಸನದಲ್ಲೇ ಮೊದಲ ಬಾರಿಗೆ ಅಳವಡಿಸಿದ್ದರು.
ಅದಾದ ಬಳಿಕ ಡಾ.ಸೌಮ್ಯ ದಿನೇಶ್ ಅವರ ಸಾರಥ್ಯದಲ್ಲಿ ಎಲ್ಲರ ಸಹಾಯದಿಂದ ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಉತ್ತಮ ಶ್ರೇಣಿ ಆಸ್ಪತ್ರೆಯನ್ನು ನವೀಕರಣ ಮಾಡಿದ್ದಾರೆ ಎಂದರು. ಇದೀಗ ಅಳವಡಿಸಿರುವ ಹೊಸ ತಂತ್ರಜ್ಞಾನವು ರೋಗಿಗಳ ಇಜಿಸಿ, ನಾಡಿಮಿಡಿತ ಮಾಹಿತಿ, ದೇಹದ ಉಷ್ಣತೆ, ಹೃದಯ ಬಡಿತ, ದೇಹದ ಭಂಗಿ, ರಕ್ತದೊತ್ತಡ ಮೊದಲಾದ ನಿರ್ಣಾಯಕ ಮಾಹಿತಿಗಳನ್ನು ನಿರಂತರವಾಗಿ ನೀಡಲಿದೆ ಎಂದು ಹೇಳಿದರು.
ಈ ಪ್ರದೇಶದಲ್ಲಿ ಇದು ಮೊದಲ ಪ್ರಯತ್ನ ಎಂದ ಅವರು, ಮೊದಲಿಗೆ ೩೦ ಬೆಡ್‌ಗೆ ಅಳವಡಿಸಲಾಗಿದೆ. ನರ್ಸಿಂಗ್ ಕೊಠಡಿಯಲ್ಲಿ ಒಂದು ಘಟಕ ತೆರೆಯಲಾಗುವುದು. ಅವರೂ ಮಾನಿಟರಿಂಗ್ ಮಾಡಿ ತುರ್ತಾಗಿ ಅಟೆಂಡ್ ಮಾಡಲು ಅನುಕೂಲವಾಗಲಿದ್ದು, ಹಾಸನ ಜನರ ಸೇವೆಗೆ ಅರ್ಪನೆ ಮಾಡುತ್ತಿದ್ದೇವೆ ಎಂದರು.
ಹಿಮ್ಸ್ ನಿರ್ದೇಶಕ ಡಾ.ಸಂತೋಷ್ ಮಾತನಾಡಿ, ಎಸ್‌ಎಸ್‌ಎಂ ಆಸ್ಪತ್ರೆ ಆರಂಭದಿಂದಲೂ ಕೊರೊನಾ ಇತ್ಯಾದಿ ವೇಳೆ ಉತ್ತಮ ಕೆಲಸ ಮಾಡುತ್ತಿದೆ.
ಸಂಕೀರ್ಣ ಸ್ಥಿತಿಯಲ್ಲಿ ಆರೋಗ್ಯದಲ್ಲಿ ಏರುಪೇರಾದ್ರೆ ಜೀವ ಉಳಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಡಾ.ಸುಧೀರ್ ಬೆಂಗಳೂರು ಮಾತನಾಡಿ, ಕೋಮಾದಲ್ಲಿರುವ ರೋಗಿ ನೋಡಲು ಬಯೋ ಸೆನ್ಸರ್ ವ್ಯವಸ್ಥೆ ಅನುಕೂಲವಾಗಲಿದ್ದು, ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದರು.
ಆಸ್ಪತ್ರೆಯ ಉಪ ನಿರ್ದೇಶಕಿ ಡಾ.ಶ್ರೀವಿದ್ಯಾ ಮಾತನಾಡಿ, ನಮ್ಮ ಆಸ್ಪತ್ರೆ ಆರಂಭದಿಂದಲೂ ಒಳ್ಳೆಯ ಆರೋಗ್ಯ ಸೇವೆ ಮಾಡುತ್ತಾ ಬಂದಿದ್ದು, ಈ ತಂತ್ರಜ್ಞಾನ ಅಳವಡಿಕೆ ಡಾ.ಸೌಮ್ಯ ದಿನೇಶ್ ಹಾಗೂ ಡಾ.ವಿನಾಯಕ್ ಅವರ ಕನಸಿನ ಕೂಸು. ಈ ವ್ಯವಸ್ಥೆಯಿಂದ ರೋಗಿಗಳ ಬಗ್ಗೆ ವೈದ್ಯರಿಗೆ ಲೈವ್ ಅಪ್ ಡೇಟ್ ಬರಲಿದೆ. ರೋಗಿಗಳಿಗೆ, ವೈದ್ಯರಿಗೆ ತುಂಬಾ ಉಪಯೋಗವಾಗಲಿದೆ ಎಂದರು. ಲೈಫ್ ಸೈನ್ಸ್ ಸಹ ಸಂಸ್ಥಾಪಕ ಡಾ.ಗಿರೀಶ್ ಚಂದ್ರ ಮೊದಲಾದವರಿದ್ದರು.