ಸೀಗೆ ಮಳೆ ಮಲ್ಲೇಶ್ವರ ಕ್ಷೇತ್ರದ ನೂತನ ಧರ್ಮಾಧಿಕಾರಿಯಾಗಿ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ನೇಮಕ

ಧರ್ಮ ಮಾರ್ಗದ ಜೀವನದಿಂದ ಮೋಕ್ಷ ಸಾಧನೆ: ಬಸವಾಪಟ್ಟಣ ಸ್ವತಂತ್ರ ಬಸವಲಿಂಗ ಸ್ವಾಮೀಜಿ

ಹಾಸನ: ಮಾನವರು ಧರ್ಮ  ಮಾರ್ಗದಲ್ಲಿ ಜೀವನ ಸಾಗಿಸುವ ಮೂಲಕ ಮನುಷ್ಯ ಜನ್ಮದ ಪರಮೋಚ್ಚ ಗುರಿಯಾದ ಮೋಕ್ಷ ಸಂಪಾದಿಸಬಹುದು ಎಂದು ಬಸವಾಪಟ್ಟಣದ ಶ್ರೀ ತೋಂಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಹೇಳಿದರು.

ಹಾಸನ ತಾಲ್ಲೂಕು ಸೀಗೆನಾಡಿನ ಶ್ರೀ ಕ್ಷೇತ್ರ ಮಳೆಮಲ್ಲೇಶ್ವರ ಅಭಿವೃದ್ಧಿ ಟ್ರಸ್ಟ್ ಆಯೋಜಿಸಿದ್ದ ಧರ್ಮಾಧಿಕಾರಿ ನೇಮಕ ಹಾಗೂ 109 ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬದುಕಿನಲ್ಲಿ ಬಹಳ ವಿಶೇಷವಾದ ಸಂಧರ್ಭದಲ್ಲಿ ನಾವು ಭಾಗವಹಿಸಿದ್ದು 16 ವರ್ಷಗಳ ತಪಸ್ಸಿನ ಫಲಕವನ್ನು ಸಮಾಜಕ್ಕೆ ಧಾರೆ ಎರೆಯುವ ಮೂಲಕ ಮಾನವ ಧರ್ಮದ ಬೋಧನೆ ಮಾಡಿದ ಬುದ್ಧ ಪೂರ್ಣಿಮೆಯಂದೇ ಸಮರ್ಥ ಗುರುಗಳೆನಿಸಿದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳನ್ನು ಶ್ರೀ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನತೆಗೆ ಸೂಕ್ತ ಮಾರ್ಗದರ್ಶನ ನೀಡಲು ಅಭಿವೃದ್ಧಿ ಟ್ರಸ್ಟ್ ಧರ್ಮಾಧಿಕಾರಿಯಾಗಿ ನೇಮಿಸಿರುವುದು ಸ್ತುತ್ಯಾರ್ಹ ಎಂದರು

ಸದಾ ಅಭಿವೃದ್ಧಿ ಪರವಾಗಿ ಚಿಂತಿಸುವ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು ಮಾನವೀಯ ಸಂಬಂಧಗಳನ್ನು ಬೆಸೆಯುವ ಸಾಮಾಜಿಕ ಕಾರ್ಯಗಳನ್ನು ಹಾಗೂ ಶ್ರೀ ಕ್ಷೇತ್ರದ ಅಭಿವೃದ್ಧಿಯನ್ನು ಸಾಧಿಸಿ ಪವಿತ್ರವಾದ ಈ ಕ್ಷೇತ್ರದಲ್ಲಿ ಕೆಲವು ದುಷ್ಕರ್ಮಿಗಳು ನಡೆಸುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಶ್ರೀ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಿ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಬೆಳೆಸಬೇಕು ಹಾಗೂ ಆ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರ ಇರಬೇಕೆಂದು ಎಂದರು.

ಶ್ರೀ ಕ್ಷೇತ್ರದ ನೂತನ ಧರ್ಮಾಧಿಕಾರಿ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಎಲೆರಾಂಪುರ ಶ್ರೀ ಕುಂಚಿಟಿಗ ಸಂಸ್ಥಾನದ ಶ್ರೀ ಹನುಮಂತನಾಥ ಸ್ವಾಮೀಜಿ, ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಮುಡುಕನಪುರದ ಶ್ರೀ ಷಡಕ್ಷರ ದೇಶೀಕೇಂದ್ರ ಸ್ವಾಮೀಜಿ, ದೇವಪಟ್ಟಣದ ಶ್ರೀ ಶಾಂತಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಶುಭಕೋರಿದರು.

ಈ ಸಂಧರ್ಭದಲ್ಲಿ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂಗೌಡ
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಶ್ರೀ ಕ್ಷೇತ್ರದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಹಾಗೂ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಲಲಾಟಮೂರ್ತಿ, ಸೀಗೆ ಬಸವರಾಜ್ ಇನ್ನಿತರ ಮುಖಂಡರು ಸುತ್ತಮುತ್ತಲ ಗ್ರಾಮಗಳ ಭಕ್ತರು ಭಾಗವಹಿಸಿದ್ದರು